ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಮಸಲ್ ಮೇನಿಯಾ ಬಾಡಿಬಿಲ್ಡಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳಗಾವಿಯ ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಜಿಐಟಿ) ಕಾಲೇಜಿನ ವಿದ್ಯಾರ್ಥಿ ಓಂ ವಿಜಯ್ ಪಾಟೀಲ್ ಅತ್ಯುನ್ನತ ವಿಜೇತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಗಡಿನಾಡಿಗೆ ಕೀರ್ತಿ ತಂದಿದ್ದಾರೆ. ದೇಶದ ವಿವಿಧ ರಾಜ್ಯಗಳ ನುರಿತ ಸ್ಪರ್ಧಿಗಳನ್ನು ಹಿಂದಿಕ್ಕಿ ರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಜಿಐಟಿ ವಿದ್ಯಾರ್ಥಿ ಅಪೂರ್ವ ಸಾಧನೆ ಮಾಡಿದ್ದಾರೆ.

ಬೆಳಗಾವಿಯ ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಜಿಐಟಿ) ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಆರನೇ ಸೆಮಿಸ್ಟರ್ ವಿದ್ಯಾರ್ಥಿಯಾದ ಶ್ರೀ ಓಂ ವಿಜಯ್ ಪಾಟೀಲ್ ಅವರು ಬೆಂಗಳೂರಿನ ಖಿಂಚಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಮಸಲ್ ಮೇನಿಯಾ ಬಾಡಿಬಿಲ್ಡಿಂಗ್ ಚಾಂಪಿಯನ್ಶಿಪ್ನಲ್ಲಿ ‘ವಿನ್ನರ್ ಟೈಟಲ್’ (ವಿಜೇತ ಪ್ರಶಸ್ತಿ) ಸಾಧಿಸುವ ಮೂಲಕ ಸಂಸ್ಥೆಗೆ ಅಪಾರ ಹೆಮ್ಮೆ ತಂದಿದ್ದಾರೆ. ದೇಶಾದ್ಯಂತ ವಿವಿಧ ರಾಜ್ಯಗಳನ್ನು ಪ್ರತಿನಿಧಿಸಿದ್ದ ಪ್ರಮುಖ ಶರೀರಧಾಢ್ಯ ಪಟುಗಳು ಭಾಗವಹಿಸಿದ್ದ ಈ ತೀವ್ರ ಪೈಪೋಟಿಯ ಸ್ಪರ್ಧೆಯಲ್ಲಿ, ಓಂ ಪಾಟೀಲ್ ತಮ್ಮ ಅಸಾಧಾರಣ ದೈಹಿಕ ಸೌಷ್ಠವ, ಕಠಿಣ ಸಿದ್ಧತೆ ಮತ್ತು ಅತ್ಯುತ್ತಮ ಪ್ರದರ್ಶನದ ಮೂಲಕ ಉನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿಯ ಈ ಅದ್ಭುತ ರಾಷ್ಟ್ರೀಯ ಸಾಧನೆಯನ್ನು ಶ್ಲಾಘಿಸಿರುವ ಜಿಐಟಿ ಆಡಳಿತ ಮಂಡಳಿಯ ಆಡಳಿತ ಮಂಡಳಿ ಅಧ್ಯಕ್ಷರಾದ ರಾಜೇಂದ್ರ ಬೆಳಗಾಂವಕರ್, ಸದಸ್ಯರುಗಳಾದ ರಾಮ್ ಭಂಡಾರೆ, ಯು.ಎನ್. ಕಾಲಕುಂದ್ರಿಕರ ಹಾಗೂ ಆರ್.ಎಸ್. ಮುತಾಲಿಕ್ ಅವರು ಸಂಸ್ಥೆಯ ಪರವಾಗಿ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಅಥವಲೆ, ಡೀನ್ ಅಡ್ಮಿನಿಸ್ಟ್ರೇಷನ್ ಪ್ರೊ. ದಿಗಂಬರ್ ಕುಲಕರ್ಣಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜಾರ್ಜ್ ರೊಡ್ರಿಗಸ್ ಹಾಗೂ ದೈಹಿಕ ಶಿಕ್ಷಣ ತಂಡದ ಸದಸ್ಯರಾದ ಕುಮಾರಿ ಸುಭಾಸ್ವ ಶಿಖರೆ, ಕುಮಾರಿ ಶಿವಾನಿ ಕರಾಳೆ ಮತ್ತು ಕುಮಾರಿ ನಿಕಿತಾ ಪಾಟೀಲ್ ಅವರು ಓಂ ಪಾಟೀಲ್ ಅವರ ಶಿಸ್ತು ಮತ್ತು ಕಠಿಣ ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿ, ಅವರ ಮುಂದಿನ ಕ್ರೀಡಾ ಪಯಣಕ್ಕೆ ಜಿಐಟಿ ಸಂಸ್ಥೆಯ ಸಮಸ್ತ ಸಿಬ್ಬಂದಿ ವರ್ಗದ ಪರವಾಗಿ ಶುಭ ಹಾರೈಸಿದ್ದಾರೆ.
