Uncategorized

ಬೆಳಗಾವಿ: ರೇಣುಕಾ ದೇವಿ ಜ್ಞಾನವಿಕಾಸ ಕೇಂದ್ರದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ; 138 ಜನರಿಗೆ ಆಸರೆ

Share

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳಗಾವಿ ವತಿಯಿಂದ ಮಚ್ಚೆ ವಲಯದ ಮಾರ್ಕಂಡೇಯ ನಗರದಲ್ಲಿ ಉಚಿತ ಕಣ್ಣು, ಮೂಳೆ ಹಾಗೂ ಸಕ್ಕರೆ ಕಾಯಿಲೆ ತಪಾಸಣಾ ಶಿಬಿರ ಯಶಸ್ವಿಯಾಗಿ ಜರುಗಿತು. ಸಾಯಿ ದೀಪ ಕಣ್ಣಿನ ಆಸ್ಪತ್ರೆ ಮತ್ತು ಅದ್ವೀರ್ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ಸಹಯೋಗದಲ್ಲಿ ನಡೆದ ಈ ಶಿಬಿರದಲ್ಲಿ ನೂರಾರು ಗ್ರಾಮೀಣರು ಇದರ ಸದುಪಯೋಗ ಪಡೆದುಕೊಂಡರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳಗಾವಿ-1ರ ಮಚ್ಚೆ ವಲಯದ ಮಾರ್ಕಂಡೇಯ ನಗರದ ರೇಣುಕಾ ದೇವಿ ಜ್ಞಾನವಿಕಾಸ ಕೇಂದ್ರದ ಅಡಿಯಲ್ಲಿ ಸಾಯಿ ದೀಪ ಕಣ್ಣಿನ ಆಸ್ಪತ್ರೆ ಹಾಗೂ ಮಚ್ಚೆಯ ಅದ್ವೀರ್ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಯ ಸಹಯೋಗದೊಂದಿಗೆ ನಂದಿ ದೇವಸ್ಥಾನದ ಆವರಣದಲ್ಲಿ ಉಚಿತ ಕಣ್ಣು, ಮೂಳೆ, ಕೀಲು, ಬಿಪಿ ಹಾಗೂ ಸಕ್ಕರೆ ಕಾಯಿಲೆ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಊರಿನ ಗಣ್ಯರಾದ ಸುರೇಶ್ ಗವನ್ನವರ್, ಬಸವರಾಜ್ ಧೂಳಪ್ಪನಗೋಳ, ಲಗ್ಮಣ್ಣ ಮಾಳಂಗಿ, ಒಕ್ಕೂಟದ ಅಧ್ಯಕ್ಷೆ ಲಕ್ಷ್ಮಿ, ಕೇಂದ್ರದ ಅಧ್ಯಕ್ಷೆ ಮಂಜುಳಾ, ತಾಲೂಕು ಯೋಜನಾಧಿಕಾರಿ ಪಾರ್ವತಿ, ವೈದ್ಯರಾದ ಅಬಿದ್ ಅಲಿ, ಪದ್ಮರಾಜ್, ವಿದ್ಯಾ, ವಲಯ ಮೇಲ್ವಿಚಾರಕ ಮಾರುತಿ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ದೀಪಿಕಾ ಅವರ ಸಮ್ಮುಖದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಮುಖ್ಯ ಅತಿಥಿ ಸುರೇಶ್ ಗವನ್ನವರ್ ಮಾತನಾಡಿ, ಪೂಜ್ಯ ವೀರೇಂದ್ರ ಹೆಗ್ಗಡೆಯವರು ಬಡವರಿಗಾಗಿ ಜಾರಿಗೆ ತಂದಿರುವ ಈ ಯೋಜನೆಗಳ ಸದುಪಯೋಗ ಪಡೆದು ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದರು. ಯೋಜನಾಧಿಕಾರಿ ಪಾರ್ವತಿಯವರು ವಾತ್ಸಲ್ಯ, ಸುಜ್ಞಾನಿಧಿ ಶಿಷ್ಯವೇತನ ಹಾಗೂ ಆರೋಗ್ಯ ರಕ್ಷಾ ವಿಮೆಗಳ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಒಟ್ಟು 138 ಗ್ರಾಮಸ್ಥರು ಉಚಿತ ತಪಾಸಣೆ ಪಡೆದುಕೊಂಡರು. ಕಾರ್ಯಕ್ರಮವನ್ನು ಮಾರುತಿ ಸ್ವಾಗತಿಸಿ, ದೀಪಿಕಾ ನಿರೂಪಿಸಿ, ಸೇವಾಪ್ರತಿನಿಧಿ ದೀಪಾ ಧನ್ಯವಾದ ಸಮರ್ಪಿಸಿದರು.

Tags:

error: Content is protected !!