ಬೆಳಗಾವಿ ಜಿಲ್ಲೆಯ ರಾಯಬಾಗ ಬಸ್ ನಿಲ್ದಾಣದಲ್ಲಿ ಲಗೇಜ್ ಟಿಕೆಟ್ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಕಂಡಕ್ಟರ್ ಮೇಲೆ ಕಿಡಿಗೇಡಿಗಳು ಹಲ್ಲೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಕೆಲಕಾಲ ನಿಲ್ದಾಣದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಪ್ಪಾಣಿಯಿಂದ ಗುಲ್ಬರ್ಗಾಕ್ಕೆ ಹೊರಟಿದ್ದ ಸಾರಿಗೆ ಬಸ್ನಲ್ಲಿ ಲಗೇಜ್ಗೆ ಟಿಕೆಟ್ ಪಡೆಯುವ ಸಣ್ಣ ವಿಚಾರಕ್ಕೆ ದೊಡ್ಡ ಗಲಾಟೆ ನಡೆದಿದೆ. ಬಸ್ನಲ್ಲಿದ್ದ ಕಿಡಿಗೇಡಿಗಳು ಕ್ಷುಲ್ಲಕ ಕಾರಣಕ್ಕೆ ಕಂಡಕ್ಟರ್ ಪ್ರಕಾಶ್ ಮ್ಯಾಕೇರಿ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಈ ಘಟನೆಯಿಂದಾಗಿ ರಾಯಬಾಗ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆದು, ಕೆಲಕಾಲ ಪರಿಸ್ಥಿತಿ ಸಂಪೂರ್ಣ ಉದ್ವಿಗ್ನಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ರಾಯಬಾಗ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
