ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಟ್ಟು ಪೋಷಿಸುವುದು ಇಂದಿನ ಅಗತ್ಯವಾಗಿದೆ. ಕೇಂದ್ರ ಸಹಕಾರ ಸಚಿವಾಲಯದ 5ನೇ ವಾರ್ಷಿಕೋತ್ಸವ ಹಾಗೂ ಸಹಕಾರ ಸಪ್ತಾಹದ ಅಂಗವಾಗಿ ಖಾನಾಪುರದ ಚೌರಾಶಿದೇವಿ ಸೌಹಾರ್ದ ಸೊಸೈಟಿಯು ವೃಕ್ಷಾರೋಪಣ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪರಿಸರ ಜಾಗೃತಿ ಮೂಡಿಸಿದೆ.

ಕೇಂದ್ರ ಸಹಕಾರ ಸಚಿವಾಲಯದ 5ನೇ ವಾರ್ಷಿಕೋತ್ಸವ ಹಾಗೂ ಸಹಕಾರ ಸಪ್ತಾಹದ ನಿಮಿತ್ತ ಖಾನಾಪುರದ ಚೌರಾಶಿದೇವಿ ಸೌಹಾರ್ದ ಸೊಸೈಟಿ ಆವರಣದಲ್ಲಿ ಪರಿಸರ ಜಾಗೃತಿಗಾಗಿ ವೃಕ್ಷಾರೋಪಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿನೋದ್ ಮರಾಠ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸೈಟಿ ಅಧ್ಯಕ್ಷ ಡಾ. ಡಿ. ಇ. ನಾಡಗೌಡ, ಇತ್ತೀಚಿನ ದಿನಗಳಲ್ಲಿ ಪ್ರಕೃತಿಯ ಸಮತೋಲನ ತಪ್ಪುತ್ತಿದ್ದು, ಸಕಾಲಕ್ಕೆ ಮಳೆಯಾಗಲು ಪ್ರತಿಯೊಬ್ಬರೂ ತಮ್ಮ ತಾಯಿಯ ನೆನಪಿನಲ್ಲಿ ಕನಿಷ್ಠ ಒಂದು ಗಿಡ ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು. ಸೊಸೈಟಿ ಆವರಣದಲ್ಲಿ ನೆಟ್ಟ ಗಿಡಗಳನ್ನು ಜವಾಬ್ದಾರಿಯಿಂದ ಬೆಳೆಸುವಂತೆ ಸಿಬ್ಬಂದಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಿವಾಜಿ ದೇಸೂರಕರ್, ನಿರ್ದೇಶಕ ವಿಶ್ವಾಸ್ ದೇಸಾಯಿ, ಮ್ಯಾನೇಜರ್ ಕಾಕತ್ಕರ್ ಹಾಗೂ ಸೊಸೈಟಿಯ ಸದಸ್ಯರು ಉಪಸ್ಥಿತರಿದ್ದರು.
