ಆರ್.ಬಿ.ಐ ನಿಯಮ ಗಾಳಿಗೆ ತೂರಿ 10 ವರ್ಷಗಳಿಗಿಂತ ಹೆಚ್ಚು ಅವಧಿಗೆ ಅಧಿಕಾರದಲ್ಲಿ ಮುಂದುವರಿದಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕರನ್ನು ತಕ್ಷಣವೇ ಅನರ್ಹಗೊಳಿಸಬೇಕು, ಇಲ್ಲದಿದ್ದರೆ ಸರ್ಕಾರದ ವಿರುದ್ಧವೇ ಕಾನೂನು ಹೋರಾಟ ಮಾಡುವುದಾಗಿ ಬೆಳಗಾವಿಯಲ್ಲಿಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಉತ್ತರ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಅವರು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರಡಿಸಿರುವ 2026ರ ನಿಯಮಾವಳಿಗಳ ಪ್ರಕಾರ ಯಾವುದೇ ಜಿಲ್ಲಾ ಕೇಂದ್ರ ಸಹಕಾರಿ (DCC) ಹಾಗೂ ನಗರ ಸಹಕಾರಿ ಬ್ಯಾಂಕುಗಳಲ್ಲಿ ಸತತ 10 ವರ್ಷಗಳಿಗಿಂತ ಹೆಚ್ಚು ಅವಧಿಗೆ ಯಾರೂ ನಿರ್ದೇಶಕರಾಗಿ ಇರುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಈ ನಿಯಮದನ್ವಯ ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ಸುದೀರ್ಘ ಅವಧಿಯಿಂದ ನಿರ್ದೇಶಕರಾಗಿರುವ ಪ್ರಮುಖರಾದ ಅಣ್ಣಾಸಾಹೇಬ್ ಜೊಲ್ಲೆ, ರಮೇಶ್ ಕತ್ತಿ, ಲಕ್ಷ್ಮಣ ಸವದಿ, ಅರವಿಂದ ಪಾಟೀಲ, ಮಹಾಂತೇಶ ದೊಡ್ಡಗೌಡರ, ಅಪ್ಪಾಸಾಹೇಬ ಕುಲಗುಡೆ ಮತ್ತು ನೀಲಕಂಠ ಕಪ್ಪಲಗುದ್ದಿ ಸೇರಿದಂತೆ ಒಟ್ಟು ಏಳು ಜನ ನಿರ್ದೇಶಕರನ್ನು ತಕ್ಷಣವೇ ಅನರ್ಹಗೊಳಿಸಲು ನಬಾರ್ಡ್ ಬ್ಯಾಂಕ್ ಈಗಾಗಲೇ ಸರ್ಕಾರಕ್ಕೆ ತುರ್ತು ಆದೇಶ ನೀಡಿದೆ ಎಂದು ಮಾಹಿತಿ ನೀಡಿದರು.
ಮುಂದುವರಿದು ಮಾತನಾಡಿದ ಅವರು, ಈ ರಿಸರ್ವ್ ಬ್ಯಾಂಕಿನ ತಿದ್ದುಪಡಿ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯವಾಗಲಿ ಅಥವಾ ಸಕ್ಷಮ ಪ್ರಾಧಿಕಾರವಾಗಲಿ ತಡೆಯಾಜ್ಞೆ ನೀಡಿಲ್ಲ ಎಂದು ಆರ್‌ಟಿಐ ಮೂಲಕ ಮಾಹಿತಿ ಲಭ್ಯವಾಗಿದೆ ಎಂದರು. ಕಾನೂನಿನ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯಬೇಕಾದ ಸರ್ಕಾರ ಕೂಡಲೇ ಇವರನ್ನು ಅನರ್ಹಗೊಳಿಸಲು ಮುಂದಾಗಬೇಕು. ಒಂದು ವೇಳೆ ಸರ್ಕಾರ ರಾಜಕೀಯ ಒತ್ತಡಕ್ಕೆ ಮಣಿದು ನಿರ್ದೇಶಕರನ್ನು ಅನರ್ಹಗೊಳಿಸದಿದ್ದರೆ, ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧವೇ ಕಟ್ಟುನಿಟ್ಟಿನ ಕಾನೂನಾತ್ಮಕ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು.

