ಬೆಳಗಾವಿಯ ಮಹಾಂತೇಶ ನಗರದಲ್ಲಿ ನಡೆದ “ಸಂಚಯ” ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹಣೆಯ ಪ್ರದರ್ಶನಕ್ಕೆ 2ನೇ ದಿನವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಹಾಂತೇಶ ನಗರ ರಹವಾಸಿಗಳ ಸಂಘ, ಭಾರತ ಸರ್ಕಾರದ ಅಂಚೆ ಇಲಾಖೆ ಹಾಗೂ ಬೆಳಗಾವಿ ಅಂಚೆಚೀಟಿ ಮತ್ತು ನಾಣ್ಯ ಸಂಗ್ರಹಣಾ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಈ ಪ್ರದರ್ಶನದ ಎರಡನೇ ದಿನವೂ ನೂರಾರು ವಿದ್ಯಾರ್ಥಿಗಳು ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಂಡರು.

ಬೆಳಗಾವಿಯ ಮಹಾಂತ ಭವನದಲ್ಲಿ ನಡೆದ ಈ ವಿಶಿಷ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದ ಅಂಚೆ ಇಲಾಖೆಯ ಬೆಳಗಾವಿ ಅಧೀಕ್ಷಕ ಬಿ.ಪಿ. ಮಾಳಗಿ ಅವರು, ಅಂಚೆಚೀಟಿ ಮತ್ತು ನಾಣ್ಯ ಸಂಗ್ರಹಣೆಯು ವ್ಯಕ್ತಿಯ ಜ್ಞಾನ ವೃದ್ಧಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿದೆ ಎಂದು ತಿಳಿಸಿದ್ದರು. ಸಂಗ್ರಹಣಾ ಸಂಘದ ಅಧ್ಯಕ್ಷ ಪ್ರಸಾದ ಹಿರೇಮಠ ಮಾತನಾಡಿ, ಈ ಹವ್ಯಾಸವು ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಟ್ಟು ಸೃಜನಾತ್ಮಕ ಶಕ್ತಿ ಹೆಚ್ಚಿಸುತ್ತದೆ ಎಂದಿದ್ದರು. ಬಿ.ಇಡಿ ಕಾಲೇಜಿನ ಪ್ರಾಚಾರ್ಯೆ ಡಾ. ನಿರ್ಮಲಾ ಬಟ್ಟಲ ಹಾಗೂ ರಹವಾಸಿಗಳ ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ ಗುರುವ ಅವರು, ಇತಿಹಾಸವನ್ನು ಅರಿಯಲು ಮತ್ತು ಮರೆಮಾಚಿರುವ ಐತಿಹಾಸಿಕ ಸತ್ಯಗಳನ್ನು ತಿಳಿದುಕೊಳ್ಳಲು ಇಂತಹ ಪ್ರದರ್ಶನಗಳು ಸಹಕಾರಿ ಎಂದು ಅಭಿಪ್ರಾಯಪಟ್ಟಿದ್ದರು. ಒಟ್ಟಾರೆಯಾಗಿ ಸುಮಾರು 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಪ್ರದರ್ಶನವನ್ನು ವೀಕ್ಷಿಸಿ ಜ್ಞಾನಾರ್ಜನೆ ಮಾಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ಸಿನ ಕುರಿತು ಮಾಹಿತಿ ನೀಡಿದ ಸಮಾಜ ವಿಜ್ಞಾನ ಶಿಕ್ಷಕಿ ನಿಲೋಫರ್ ಮುಲ್ಲಾ, “ಎರಡನೇ ದಿನವೂ ಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಪ್ರದರ್ಶನದಲ್ಲಿ ವಿವಿಧ ರಾಜವಂಶಗಳಿಗೆ ಸೇರಿದ ಅಪರೂಪದ ಚಿನ್ನ, ಬೆಳ್ಳಿ ನಾಣ್ಯಗಳು ಹಾಗೂ ವಿವಿಧ ದೇಶಗಳ ಕರೆನ್ಸಿ ನೋಟುಗಳನ್ನು ಪ್ರದರ್ಶಿಸಲಾಗಿತ್ತು. ಸುತ್ತಮುತ್ತಲಿನ ಹಲವು ಶಾಲೆಗಳ ವಿದ್ಯಾರ್ಥಿಗಳು ಆಗಮಿಸಿ ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಬಿ.ಇಡಿ ತರಬೇತಿ ಶಿಕ್ಷಕರ ಶ್ರಮ ಹಾಗೂ ಸಂಸ್ಥೆಯ ಕಾರ್ಯದರ್ಶಿ ಸಂಜು ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಿಂದಾಗಿ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೌಗಲಾ, ಡಾ. ಎಸ್.ವಿ. ವಾಲಿಶೆಟ್ಟಿ , ಶ್ರೀಕಾಂತ ಪಾಟೀಲ ಇನ್ನುಳಿದವರು ಪ್ರದರ್ಶವನ್ನು ಯಶಸ್ವಿಗೊಳಿಸಲು ಶ್ರಮಿಸಿದರು.
