ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತದಾರರ ಪಟ್ಟಿ ಪರಿಶೀಲನೆ ಚುನಾವಣಾ ಆಯೋಗದ ಮಹತ್ವದ ಪ್ರಕ್ರಿಯೆಯಾಗಿದ್ದು, ಮತದಾರರ ಪಟ್ಟಿಯನ್ನು ನಿಖರ ಹಾಗೂ ದೋಷರಹಿತವಾಗಿಡುವ ಉದ್ದೇಶದಿಂದ ರಾಜ್ಯಾದ್ಯಂತ ಕೈಗೊಳ್ಳಲಾಗಿದೆ. ಈ ಪ್ರಕ್ರಿಯೆಯಲ್ಲಿ ಗಡಿ ಭಾಗದ ಕೆಲವರು ಎರಡು ರಾಜ್ಯಗಳಲ್ಲಿ ಮತದಾರರಾಗಿ ಹೆಸರು ಹೊಂದಿರುವ ಪ್ರಕರಣಗಳು ಗಮನಕ್ಕೆ ಬಂದಿದ್ದು, ಇಂತಹ ಲೋಪಗಳನ್ನು ಸರಿಪಡಿಸಿ “ಒಬ್ಬ ವ್ಯಕ್ತಿ – ಒಂದು ಮತ” ಎಂಬ ತತ್ವವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸುಭಾಷ್ ಸಂಪಗಾವಿ ತಿಳಿಸಿದರು.

ಮಂಗಳವಾರ ಕಾಗವಾಡ ತಹಶೀಲ್ದಾರ್ ಕಚೇರಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತದಾರರ ಪಟ್ಟಿ ಪರಿಶೀಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಗವಾಡ ತಾಲೂಕಿನಲ್ಲಿ ೧,೦೩,೩೨೫ ಪುರುಷ ಹಾಗೂ ೧,೦೨,೦೫೭ ಮಹಿಳಾ ಮತದಾರರು ಸೇರಿದಂತೆ ಒಟ್ಟು ೨,೦೫,೩೮೯ ಮತದಾರರಿದ್ದು, ೨೩೧ ಮತಗಟ್ಟೆಗಳಲ್ಲಿ ೨೩೧ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಕಾರ್ಯನಿರ್ವಹಿಸಲಿದ್ದಾರೆ. ಇವರಿಗೆ ೨೩ ಮಂದಿ ಮೇಲ್ವಿಚಾರಕರು (ಸೂಪರ್‌ವೈಸರ್‌ಗಳು) ಸಹಕರಿಸಲಿದ್ದು, ತಾಲೂಕು ನೋಡಲ್ ಅಧಿಕಾರಿಗಳಾಗಿ ಕಾಗವಾಡ ಹಾಗೂ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಬಳಿಕ ಮನೆ-ಮನೆಗೆ ತೆರಳಿ ಮತದಾರರ ಪಟ್ಟಿ ಪರಿಶೀಲನೆ ಕಾರ್ಯಕ್ಕೆ ಚಾಲನೆ ನೀಡಿದ ಅವರು, ಬಿಎಲ್‌ಒಗಳು ಪ್ರತಿಯೊಬ್ಬ ಮತದಾರರ ಹೆಸರು, ವಿಳಾಸ, ವಯಸ್ಸು ಹಾಗೂ ಇತರೆ ವಿವರಗಳನ್ನು ಪರಿಶೀಲಿಸಬೇಕು. ಶಾಶ್ವತವಾಗಿ ಸ್ಥಳಾಂತರಗೊAಡವರು, ಮೃತಪಟ್ಟವರು, ಒಂದಕ್ಕಿAತ ಹೆಚ್ಚು ಕಡೆ ಹೆಸರು ಹೊಂದಿರುವವರು ಅಥವಾ ಅನರ್ಹ ಮತದಾರರ ವಿವರಗಳನ್ನು ಪರಿಶೀಲಿಸಿ ಪಟ್ಟಿಯನ್ನು ಪರಿಷ್ಕರಿಸಬೇಕು ಎಂದು ಸೂಚಿಸಿದರು. ಇದೇ ವೇಳೆ ೧೮ ವರ್ಷ ಪೂರ್ಣಗೊಂಡ ಹೊಸ ಅರ್ಹ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸುವುದು ಹಾಗೂ ಹೆಸರು, ವಿಳಾಸ ಸೇರಿದಂತೆ ಇತರೆ ವಿವರಗಳಲ್ಲಿ ಅಗತ್ಯ ತಿದ್ದುಪಡಿ ಮಾಡುವ ಅವಕಾಶವೂ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿ, ಮುಂಬರುವ ಚುನಾವಣೆಗಳು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಯಲು ಶುದ್ಧ ಮತ್ತು ನಿಖರ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದೇ ವಿಶೇಷ ತೀವ್ರ ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಸುಭಾಷ್ ಸಂಪಗಾವಿ ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರವೀಂದ್ರ ಹಾದಿಮನಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಗ್ರೇಡ್-೨ ತಹಶೀಲ್ದಾರ್ ರಶ್ಮಿ ಜಕಾತೆ, ಉಪ ತಹಶೀಲ್ದಾರ್ ಅನ್ನಾಸಾಹೇಬ ಕೊರೆ, ಕಂದಾಯ ನಿರೀಕ್ಷಕ ಎಂ.ಆರ್. ಮುಲ್ಲಾ ಹಾಗೂ ಬಿಆರ್‌ಪಿ ರವೀಂದ್ರ ನಾಂದನಿ ಉಪಸ್ಥಿತರಿದ್ದರು.
