ಪತಿಯ ದೀರ್ಘಾಯುಷ್ಯಗಾಗಿ ವಿವಾಹಿತ ಮಹಿಳೆಯರು ಆಚರಿಸುವ ಪವಿತ್ರ ವ್ರತವೇ ವಟಸಾವಿತ್ರಿ ವ್ರತ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲೂ ಕೂಡಾ ವಟಸಾವಿತ್ರಿ ಪೂಜೆಯನ್ನು ವಿವಾಹಿತ ಮಹಿಳೆಯರು ಅತ್ಯಂತ ಸಡಗರ ಮತ್ತು ಭಕ್ತಿಭಾವದಿಂದ ಆಚರಿಸಿದ್ದಾರೆ. ಆಲದ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಪತಿಯ ನೂರಾಲು ಕಾಲ ಸುಖವಾಗಿ ಬಾಳಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ…


ಸೌಭಾಗ್ಯದ ಸಂಕೇತವಾಗಿರುವ ವಟಸಾವಿತ್ರಿ ವ್ರತವನ್ನು ಚಿಕ್ಕೋಡಿ ಪಟ್ಟಣದಲ್ಲಿ ಸಡಗರದಿಂದ ಆಚರಿಸಲಾಯಿತು. ಪತಿಯ ದೀರ್ಘಾಯುಷ್ಯಕ್ಕಾಗಿ ಚಿಕ್ಕೋಡಿಯಲ್ಲಿನ ವಿವಾಹಿತ ಮಹಿಳೆಯರು ಬೆಳ್ಳಂಬೆಳಗ್ಗೆಯೇ ಸಾಂಪ್ರದಾಯಿಕವಾಗಿ ವ್ರತ ಕೈಗೊಂಡರು. ಪಟ್ಟಣದ ವಿವಿಧ ಭಾಗಗಳಲ್ಲಿರುವ ಆಲದ ಮರಗಳ ಬಳಿ ಜಮಾಯಿಸಿದ ನಾರಿಯರು ಭಕ್ತಿ ಸಾಗರದಲ್ಲಿ ತೇಲಿದರು.
ಇನ್ನು ಪೂಜೆಯ ಅಂಗವಾಗಿ ಮಹಿಳೆಯರು ಆಲದ ಮರಕ್ಕೆ ಬಿಳಿ ದಾರವನ್ನು ಸುತ್ತಿ ಪ್ರದಕ್ಷಿಣೆ ಹಾಕಿದರು. ಮಾವಿನ ಕಾಯಿ, ಬಾಳೆ ಹಣ್ಣು ಹಾಗೂ ಅರಿಶಿನ-ಕುಂಕುಮ ಹಚ್ಚಿ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಿದರು. ಮುತ್ತೈದೆಯರು ಪರಸ್ಪರ ಉಡಿತುಂಬುವ ಮೂಲಕ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಪತಿಯ ಪ್ರಾಣವನ್ನು ಯಮಧರ್ಮನಿಂದ ಮರಳಿ ತಂದ ಸತಿಯ ಪೌರಾಣಿಕ ಹಿನ್ನೆಲೆಯ ನೆನಪಿನಲ್ಲಿ ಈ ಆಚರಣೆ ನಡೆಯಿತು.ಗಂಡನ ದೀರ್ಘಾಯುಷ್ಯಕ್ಕಾಗಿ ವಟಸಾವಿತ್ರಿ ವ್ರತ ಮಾಡ್ತಾ ಇದ್ದೇವೆ. ಬೆಳಗ್ಗೆಯಿಂದ ಉಪವಾಸ ಇದ್ದು, ಆಲದ ಮರಕ್ಕೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿದ್ದೇವೆ ಎಂದು ಮಹಿಳೆಯರು ಅಭಿಪ್ರಾಯ ಹಂಚಿಕೊಂಡರು.
ಪತಿಯನ್ನು ಯಮಧರ್ಮರಾಯ ಕರೆದುಕೊಂಡು ಹೋಗುವಾಗ ಪತ್ನಿ ಸಾವಿತ್ರಿಯು ಆಲದ ಮರಕ್ಕೆ ಪೂಜೆ ಸಲ್ಲಿಸಿದ ಬಳಿಕವೇ ಪತಿಯ ಆಯುಷ್ಯ ಹೆಚ್ಚಾಯಿತು ಹಾಗೂ ಆಲದ ಮರದಲ್ಲೇ ಗಂಡನ ಜೀವ ಉಳಿಯಿತು ಎಂಬ ಪೌರಾಣಿಕ ನಂಬಿಕೆ ಇದೆ. ಹೀಗಾಗಿ ಆಲದ ಮರಕ್ಕೆ ಇಲ್ಲಿ ವಿಶೇಷ ಮಹತ್ವವಿದ್ದು, ಮಹಿಳೆಯರು ಶ್ರದ್ಧಾಭಕ್ತಿಯಿಂದ ಉಪವಾಸ ವ್ರತ ಆಚರಿಸಿ ಸೌಭಾಗ್ಯ ಕರುಣಿಸುವಂತೆ ಪ್ರಾರ್ಥಿಸಿದರು.
ಒಟ್ಟಿನಲ್ಲಿ ಆಧುನಿಕತೆಯ ಯುಗದಲ್ಲೂ ಸನಾತನ ಸಂಸ್ಕೃತಿ ಮತ್ತು ದಾಂಪತ್ಯದ ಪವಿತ್ರತೆಯನ್ನು ಸಾರುವ ವಟಸಾವಿತ್ರಿ ವ್ರತ ಚಿಕ್ಕೋಡಿಯಲ್ಲಿ ಅತ್ಯಂತ ಯಶಸ್ವಿಯಾಗಿ ಮತ್ತು ಭಕ್ತಿಯ ಪರಾಕಾಷ್ಠೆಯೊಂದಿಗೆ ಜರುಗಿತು.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ
