ಸ್ಥಳೀಯ ಪಟ್ಟಣದ ಬಾಹುಬಲಿ ಹುಕ್ಕೇರಿ ಮತ್ತು ಶುಭಂ ಬಡವೆ ಅವರು ಕೈಗೊಂಡಿದ್ದ 47 ದಿನಗಳ ಸಾಹಸಮಯ ಉತ್ತರ ಭಾರತದ ಮೋಟಾರ್‌ಸೈಕಲ್ ಮಹಾಯಾತ್ರೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮೇ 11, 2026 ರಂದು ಆರಂಭವಾದ ಈ ಆತ್ಮಾನ್ವೇಷಣೆಯ ಪಯಣದಲ್ಲಿ ಸವಾರರು ಪಂಚಕೇದಾರದಿಂದ ಹಿಡಿದು ವಿಶ್ವದ ಅತಿ ಎತ್ತರದ ಉಮ್ಲಿಂಗ್ ಲಾ ರಸ್ತೆಯವರೆಗೆ ಸಂಚರಿಸಿ ಸಾಧನೆ ಮಾಡಿದ್ದಾರೆ.


ಚಿಕ್ಕೋಡಿಯ ಬಾಹುಬಲಿ ಹುಕ್ಕೇರಿ ಹಾಗೂ ಶುಭಂ ಬಡವೆ ಅವರೊಂದಿಗೆ ರಾಣೆಬೆನ್ನೂರಿನ ಶ್ಯಾಮಸುಂದರ ದೈವಜ್ಞ, ಮಹಾರಾಷ್ಟ್ರದ ಕುರುಂದವಾಡದ ಸೋಮನಾಥ ಸುತಾರ, ವಿವೇಕ ಪಾಟೀಲ್ ಹಾಗೂ ಹರಿದ್ವಾರದಲ್ಲಿ ಜೊತೆಯಾದ ಆದರ್ಶ ಪಾಟೀಲ್ ಸೇರಿ ಒಟ್ಟು ಆರು ಜನರ ತಂಡ ಈ ಯಾತ್ರೆ ಕೈಗೊಂಡಿತ್ತು.ಉತ್ತರಾಖಂಡದ ಪ್ರಸಿದ್ಧ ಪಂಚಕೇದಾರಗಳಾದ ಕೇದಾರನಾಥ, ಮಧ್ಯಮಹೇಶ್ವರ, ತುಂಗನಾಥ, ರುದ್ರನಾಥ ಹಾಗೂ ಕಲ್ಪೇಶ್ವರ ದೇವಾಲಯಗಳ ದರ್ಶನ ಪಡೆದ ತಂಡ, ಸುಮಾರು 187 ಕಿಲೋಮೀಟರ್‌ಗಳ ಅತ್ಯಂತ ಕಠಿಣ ಟ್ರೆಕ್ಕಿಂಗ್ ಪೂರ್ಣಗೊಳಿಸಿತು. ತದನಂತರ ಬದ್ರಿನಾಥ ಮತ್ತು ಭಾರತದ ಮೊದಲ ಗ್ರಾಮ ‘ಮಾಣಾ’ ತಲುಪಿ ಮೊದಲ ಹಂತ ಮುಕ್ತಾಯಗೊಳಿಸಿತು.
ಹಿಮಾಚಲ ಪ್ರದೇಶದ ಸ್ಪಿತಿ ವ್ಯಾಲಿಯ ಚಿತ್ಕುಲ್, ಕಲ್ಪಾ, 550 ವರ್ಷ ಹಳೆಯ ಗುಯೆ ಮಠದ ಮಮ್ಮಿ, ನಾಕೋ ಸರೋವರ ಮತ್ತು ಕಾಜಾ ಗ್ರಾಮಗಳಿಗೆ ಭೇಟಿ ನೀಡಿದರು. ವಿಶ್ವದ ಅತಿ ಎತ್ತರದ ಹಿಕ್ಕಿಂ ಅಂಚೆ ಕಚೇರಿಯಿಂದ ಮನೆಗೆ ಪತ್ರ ಬರೆದು ಪೋಸ್ಟ್ ಮಾಡಿದ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾದರು.ಏಷ್ಯಾದ ಅತಿ ಉದ್ದದ ಚಿಚಮ್ ಬ್ರಿಡ್ಜ್ ಹಾಗೂ ಚಂದ್ರತಾಲ್ ಸರೋವರ ವೀಕ್ಷಿಸಿದ ಸವಾರರಿಗೆ, ಚಂದ್ರತಾಲ್‌ನಿಂದ ಮನಾಲಿಯವರೆಗಿನ 150 ಕಿ.ಮೀ. ಸಂಪೂರ್ಣ ಆಫ್‌ರೋಡ್, ಕೆಸರು, ಬಂಡೆಗಳು ಹಾಗೂ 20ಕ್ಕೂ ಹೆಚ್ಚು ನೀರಿನ ಹರಿವುಗಳನ್ನು ದಾಟುವ ಹಾದಿ ಅತ್ಯಂತ ಕಠಿಣ ಪರೀಕ್ಷೆಯಾಗಿತ್ತು ಎಂದು ಸವಾರರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸಾಧನೆ ಮುಗಿಸಿ ಚಿಕ್ಕೋಡಿಯ ಮಹಾವೀರ ನಗರಕ್ಕೆ ಮರಳಿ ಆಗಮಿಸಿದ ಯಾತ್ರಿಗಳನ್ನು ಕುಟುಂಬಸ್ಥರು ಹಾಗೂ ನಿವಾಸಿಗಳು ಆರತಿ ಬೆಳಗಿ, ಹೂ ನೀಡಿ, ಕೇಕ್ ಕತ್ತರಿಸುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ದಯಾನಂದ ತುಬಚಿ, ಶಿವಪುತ್ರ ದರ್ಬಾರೆ, ಅಣ್ಣಾಸಾಹೇಬ ಕಾಮನೆ, ಚಂದ್ರಕಾಂತ ಹುಕ್ಕೇರಿ, ಅಭಿನಂದನ ಹುಕ್ಕೇರಿ ಹಾಗೂ ಮಹಾವೀರ ನಗರದ ಮಹಿಳೆಯರು, ನಾಗರಿಕರು ಉಪಸ್ಥಿತರಿದ್ದರು.
