Chikkodi

ವಿದ್ಯುತ್ ತಗುಲಿ ಟೈಯರ್ ಅಂಗಡಿ ಮಾಲೀಕ ದುರ್ಮರಣ

Share

ಅಂಗಡಿ ಬಂದ್ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಹರಿದು ಟೈಯರ್ ಅಂಗಡಿಯ ಮಾಲೀಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಸಂಭವಿಸಿದೆ.

ಪವನ ಮಾನೆ (28)ಮೃತಪಟ್ಟ ದುರ್ದೈವಿ ಅಂಗಡಿ ಮಾಲೀಕ ಎಂದು ಗುರುತಿಸಲಾಗಿದೆ.ಮೃತ ಪವನ ಮಾನೆ ಅವರು ಜೋಡಕುರಳಿ ಗ್ರಾಮದಲ್ಲಿ ಟೈಯರ್ ಅಂಗಡಿಯನ್ನು ನಡೆಸುತ್ತಿದ್ದರು. ಎಂದಿನಂತೆ ರಾತ್ರಿ ತಮ್ಮ ವ್ಯಾಪಾರ ಮುಗಿಸಿ ಅಂಗಡಿಯನ್ನು ಬಂದ್ ಮಾಡುತ್ತಿದ್ದ ಸಂದರ್ಭದಲ್ಲಿ ಈ ಆಕಸ್ಮಿಕ ವಿದ್ಯುತ್ ಅವಘಡ ಸಂಭವಿಸಿದೆ ಎನ್ನಲಾಗಿದೆ. ಶಾರ್ಟ್ ಸರ್ಕ್ಯೂಟ್ ಅಥವಾ ಹಳೆಯ ವೈರಿಂಗ್‌ನಿಂದಾಗಿ ಅಂಗಡಿಯ ಇಕ್ಕಟ್ಟಿನ ಜಾಗದಲ್ಲಿ ವಿದ್ಯುತ್ ಪ್ರವಹಿಸಿದ್ದು, ಅಂಗಡಿ ಮುಚ್ಚುವಾಗ ಪವನ ಅವರಿಗೆ ತಗುಲಿದೆ. ಕರೆಂಟ್ ಶಾಕ್ ತೀವ್ರತೆಗೆ ಪವನ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಹಾಗೂ ಸ್ಥಳೀಯರ ಆಕ್ರಂದನ ಮುಗಿಲು ಮುಟ್ಟಿದೆ. ಹಳೆಯ ವಿದ್ಯುತ್ ಲೈನ್‌ಗಳ ನಿರ್ವಹಣೆಯ ಕೊರತೆಯೇ ಇಂತಹ ಅವಘಡಗಳಿಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

Tags:

error: Content is protected !!