ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಸಾರ್ವಜನಿಕರ ಬಹುಕಾಲದ ನಿರೀಕ್ಷೆಯಾಗಿದ್ದ ಅತ್ಯಾಧುನಿಕ ತಾಲ್ಲೂಕು ಆಡಳಿತ ಕೇಂದ್ರ ‘ಪ್ರಜಾಸೌಧ’ ಕಟ್ಟಡ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶನಿವಾರ ಅಧಿಕೃತ ಚಾಲನೆ ನೀಡಿದರು. ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸುವುದರಿಂದ ಸಾರ್ವಜನಿಕರು ತಮ್ಮ ಕೆಲಸ-ಕಾರ್ಯಗಳಿಗಾಗಿ ಬೇರೆ ಬೇರೆ ಕಡೆ ಅಲೆಯುವುದು ತಪ್ಪಲಿದ್ದು, ಪಾರದರ್ಶಕ ಆಡಳಿತ ಸಿಗಲಿದೆ ಎಂದು ಸಚಿವರು ಭರವಸೆ ನೀಡಿದರು.


ಯರಗಟ್ಟಿ ತಾಲ್ಲೂಕಿನ ಸಾರ್ವಜನಿಕರ ಬಹುಕಾಲದ ನಿರೀಕ್ಷೆಯಾಗಿದ್ದ, ಸಾರ್ವಜನಿಕರಿಗೆ ಒಂದೇ ಸೂರಿನಡಿ ಸುಲಭ ಹಾಗೂ ಜನಸ್ನೇಹಿ ಆಡಳಿತ ಸೇವೆಗಳನ್ನು ಒದಗಿಸುವ ಮಹತ್ವಾಕಾಂಕ್ಷೆಯ ಅತ್ಯಾಧುನಿಕ ತಾಲ್ಲೂಕು ಆಡಳಿತ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶನಿವಾರ ಅಧಿಕೃತ ಚಾಲನೆ ನೀಡಿ ಅವರು ಮಾತನಾಡಿದರು.ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಹಾಗೂ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಸವದತ್ತಿ, ಧಾರವಾಡ, ಗೋಕಾಕ್ ಹಾಗೂ ಬೈಲಹೊಂಗಲ ಭಾಗದ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಸಿಆರ್ಐಎಫ್ (CRIF) ಯೋಜನೆಯಡಿ 48 ಕೋಟಿ ರೂ. ಹಾಗೂ ರಸ್ತೆಗಳ ದುರಸ್ತಿಗೆ 58 ಕೋಟಿ ರೂ.ಗಳನ್ನು ಈಗಾಗಲೇ ಮಂಜೂರು ಮಾಡಲಾಗಿದ್ದು, ಸಾರ್ವಜನಿಕರಿಗೆ ಕಚೇರಿ ಕೆಲಸಗಳು ಸುಲಭವಾಗಿ ಕೈಗೆಟುಕುವಂತೆ ಮಾಡಲು ತಾತ್ಕಾಲಿಕ ಮತ್ತು ಕಾಯಂ ಕಚೇರಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದರು. ಜನರ ಮನೆ ಬಾಗಿಲಿಗೆ ಬಂದು ಕೆಲಸ ಮಾಡುವ ನಾಯಕರನ್ನು ಗುರುತಿಸಿ ಬೆಂಬಲಿಸಬೇಕು ಎಂದು ಈ ಸಂದರ್ಭದಲ್ಲಿ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಮಾತನಾಡಿದ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಅವರು, “ಯರಗಟ್ಟಿ ತಾಲ್ಲೂಕಿನ ಜನತೆ ಸುಸಜ್ಜಿತ ಆಡಳಿತ ಕೇಂದ್ರಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದರು. ಇಂದು ₹8.60 ಕೋಟಿ ವೆಚ್ಚದ ಅತ್ಯಾಧುನಿಕ ಪ್ರಜಾಸೌಧ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿರುವುದು ನಮ್ಮ ಕ್ಷೇತ್ರದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಯರಗಟ್ಟಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತಳಮಟ್ಟದವರೆಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ನಾವು ಸದಾ ಬದ್ಧರಾಗಿದ್ದೇವೆ. ಈ ಬೃಹತ್ ಯೋಜನೆಗೆ ಸಹಕರಿಸಿದ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಹರ್ಷ ವ್ಯಕ್ತಪಡಿಸಿದರು. 
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸ್ಥಳೀಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಪ್ರಮುಖ ರಾಜಕೀಯ ಮುಖಂಡರು, ವಿವಿಧ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಯರಗಟ್ಟಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
