Belagavi

ಬೆಳಗಾವಿಯಲ್ಲಿ ‘ಖೇಲೋ ಇಂಡಿಯಾ’ ಯೋಜನೆಯಡಿ ಭವ್ಯ ಹಾಕಿ ಮೈದಾನ ನಿರ್ಮಾಣಕ್ಕೆ ವೇಗ

Share

ಹಾಕಿಯ ಪವಿತ್ರ ನೆಲೆ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿಯಲ್ಲಿ ಮತ್ತೊಮ್ಮೆ ಕ್ರೀಡಾ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬುವ ಮಹತ್ವದ ಬೆಳವಣಿಗೆ ನಡೆದಿದ್ದು, ಕೇಂದ್ರ ಸರ್ಕಾರದ ‘ಖೇಲೋ ಇಂಡಿಯಾ’ ಯೋಜನೆಯಡಿ ಭವ್ಯ ಹಾಗೂ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಹಾಕಿ ಮೈದಾನ ನಿರ್ಮಾಣಕ್ಕೆ ಸಕಾರಾತ್ಮಕ ಹೆಜ್ಜೆ ಇಡಲಾಗಿದೆ.

ಬೆಳಗಾವಿಯ ಕ್ರೀಡಾ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ‘ಹಾಕಿ ಬೆಳಗಾವಿ’ ಸಂಘಟನೆಯ ಪದಾಧಿಕಾರಿಗಳು ಸಕಲ ಮರಾಠಾ ಸಮಾಜದ ಮುಖಂಡ ಹಾಗೂ ಬಿಜೆಪಿ ಹಿರಿಯ ನಾಯಕ ಕಿರಣ್ ಜಾಧವ್ ಅವರ ನೇತೃತ್ವದಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹಾಗೂ ಕ್ಯಾಂಟೋನ್ಮೆಂಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುದಾಮ್ ಮಂಚನವಾರ್ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.

ಸಭೆಯಲ್ಲಿ ಬೆಳಗಾವಿಯ ಹಾಕಿ ಕ್ರೀಡೆಯ ಇತಿಹಾಸ, ನಗರದ ಕ್ರೀಡಾಪಟುಗಳು ಎದುರಿಸುತ್ತಿರುವ ಮೂಲಸೌಕರ್ಯ ಕೊರತೆ ಹಾಗೂ ಆಧುನಿಕ ಮೈದಾನದ ಅಗತ್ಯತೆಯ ಕುರಿತು ವಿವರವಾಗಿ ಚರ್ಚೆ ನಡೆಯಿತು. ಬೆಳಗಾವಿ ದೇಶದ ವಿವಿಧ ಭಾಗಗಳಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಾಕಿ ಆಟಗಾರರನ್ನು ನೀಡಿರುವ ಹೆಗ್ಗಳಿಕೆ ಹೊಂದಿದ್ದು, ಇಲ್ಲಿನ ಕ್ರೀಡಾ ಪರಂಪರೆಯನ್ನು ಉಳಿಸಿ ಬೆಳೆಸಲು ಗುಣಮಟ್ಟದ ಮೈದಾನದ ಅವಶ್ಯಕತೆ ಇದೆ ಎಂದು ಪದಾಧಿಕಾರಿಗಳು ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್ ಅವರು, ಬೆಳಗಾವಿಯಲ್ಲಿ ಭವ್ಯವಾದ ಹಾಕಿ ಮೈದಾನ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಮಹತ್ವಾಕಾಂಕ್ಷಿ ‘ಖೇಲೋ ಇಂಡಿಯಾ’ ಯೋಜನೆಯಡಿ ವಿಶೇಷ ಅನುದಾನ ಮತ್ತು ಅನುಮೋದನೆ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

“ಬೆಳಗಾವಿಯ ಹಾಕಿ ಪರಂಪರೆ ದೇಶದ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಕ್ರೀಡಾಪಟುಗಳಿಗೆ ಅತ್ಯುತ್ತಮ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯ. ಈ ಯೋಜನೆಗೆ ಅಗತ್ಯವಿರುವ ಅನುದಾನವನ್ನು ಕೇಂದ್ರ ಸರ್ಕಾರದಿಂದ ತರಲು ನಾನು ವೈಯಕ್ತಿಕವಾಗಿ ದೆಹಲಿಯಲ್ಲಿ ನಿರಂತರವಾಗಿ ಫಾಲೋ-ಅಪ್ ಮಾಡುತ್ತೇನೆ. ಬೆಳಗಾವಿಯಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಹಾಕಿ ಮೈದಾನ ನಿರ್ಮಾಣವಾಗುವಂತೆ ಶ್ರಮಿಸುತ್ತೇನೆ,” ಎಂದು ಅವರು ಹೇಳಿದರು.

ಕ್ಯಾಂಟೋನ್ಮೆಂಟ್ ಮಂಡಳಿಯ ಸಿಇಒ ಸುದಾಮ್ ಮಂಚನವಾರ್ ಅವರು ಸಹ ಈ ಯೋಜನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಮೈದಾನ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ತ್ವರಿತವಾಗಿ ಸಿದ್ಧಪಡಿಸಿ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಳುಹಿಸುವುದಾಗಿ ಅವರು ಭರವಸೆ ನೀಡಿದರು. ಯೋಜನೆಯ ತಾಂತ್ರಿಕ ಅಂಶಗಳ ನಿರ್ವಹಣೆಯ ಜವಾಬ್ದಾರಿಯನ್ನು ಕ್ಯಾಂಟೋನ್ಮೆಂಟ್ ಮಂಡಳಿಯ ಕಾರ್ಯಪಾಲಕ ಅಭಿಯಂತರ ಸತೀಶ್ ಮನೋಲ್ಕರ್ ಅವರಿಗೆ ವಹಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ‘ಹಾಕಿ ಬೆಳಗಾವಿ’ ಸಂಘಟನೆಯ ಪ್ರತಿನಿಧಿಗಳು, ಹಲವು ವರ್ಷಗಳಿಂದ ಬೆಳಗಾವಿಯ ಹಾಕಿ ಕ್ರೀಡಾಪಟುಗಳು ಸೂಕ್ತ ಮೈದಾನದ ಕೊರತೆಯನ್ನು ಎದುರಿಸುತ್ತಿದ್ದಾರೆ. ಈ ಯೋಜನೆ ಸಾಕಾರಗೊಂಡರೆ ಯುವ ಪ್ರತಿಭೆಗಳಿಗೆ ಉತ್ತಮ ಅವಕಾಶಗಳು ದೊರೆಯಲಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಬಿಜೆಪಿ ನಾಯಕ ಹಾಗೂ ಸಕಲ ಮರಾಠಾ ಸಮಾಜದ ಮುಖಂಡ ಕಿರಣ್ ಜಾಧವ್, ‘ಹಾಕಿ ಬೆಳಗಾವಿ’ ಪದಾಧಿಕಾರಿಗಳಾದ ಗೋಪಾಲಪ್ಪ ಹೊಸಮನಿ, ಕಾರ್ಯದರ್ಶಿ ಸುಧಾಕರ್ ಚಾಳ್ಕೆ, ಪ್ರಕಾಶ್ ಬೆಳಗೋಜಿ, ಉತ್ತಮ್ ಶಿಂಧೆ, ನಾಮದೇವ್ ಸಾವಂತ್, ಸಾಗರ್ ಪಾಟೀಲ್, ಕವಿತಾ ವೇಸಣೆ ಸೇರಿದಂತೆ ಸಂಘಟನೆಯ ಅನೇಕ ಪದಾಧಿಕಾರಿಗಳು ಮತ್ತು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

ಬೆಳಗಾವಿಯ ಹಾಕಿ ಪರಂಪರೆಯನ್ನು ಮತ್ತೆ ಉತ್ತುಂಗಕ್ಕೇರಿಸುವ ದಿಸೆಯಲ್ಲಿ ನಡೆದಿರುವ ಈ ಸಭೆ ಮಹತ್ವದ ತಿರುವು ಪಡೆದಿದ್ದು, ‘ಖೇಲೋ ಇಂಡಿಯಾ’ ಯೋಜನೆಯಡಿ ಭವ್ಯ ಹಾಕಿ ಮೈದಾನ ನಿರ್ಮಾಣವಾದರೆ ನಗರದ ಕ್ರೀಡಾ ಕ್ಷೇತ್ರಕ್ಕೆ ಹೊಸ ಅಧ್ಯಾಯ ಆರಂಭವಾಗಲಿದೆ. ಈ ಮೈದಾನವು ಭವಿಷ್ಯದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲು ಸಹ ನೆರವಾಗಲಿದ್ದು, ಬೆಳಗಾವಿಯ ಯುವ ಪ್ರತಿಭೆಗಳಿಗೆ ಪ್ರೇರಣೆಯ ಕೇಂದ್ರವಾಗಲಿದೆ ಎಂಬ ವಿಶ್ವಾಸವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

Tags:

error: Content is protected !!