ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗೊಂದು ಮಹತ್ವದ ಬೆಳವಣಿಗೆಯಾಗಿದೆ. ಇಡಿ ದಾಳಿಯಿಂದ ತತ್ತರಿಸಿರುವ ವೈ. ಮಂಜುನಾಥ್ ಬೆಳಗಾವಿಗೆ ಆಗಮಿಸುತ್ತಿದ್ದಂತೆ ಅಲರ್ಟ್ ಆಗಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ಪ್ರಸಿದ್ಧ ಚಾರ್ಟರ್ಡ್ ಅಕೌಂಟೆಂಟ್ (CA) ಅವರನ್ನು ಭೇಟಿಯಾಗಿ ಮಹತ್ವದ ಗಹನ ಚರ್ಚೆ ನಡೆಸಿದ್ದಾರೆ.

ವೈ. ಮಂಜುನಾಥ್ ಮನೆಯ ಮೇಲೆ ಇಡಿ ದಾಳಿಯ ಬೆನ್ನಲ್ಲೇ ಬೆಳಗಾವಿಯ ಟಿವಿ ಸೆಂಟರ್‌ನಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ, ನಗರದ ಅತ್ಯಂತ ಪ್ರಸಿದ್ಧ ಲೆಕ್ಕ ಪರಿಶೋಧಕರಾದ ಸಿಎ ಪಿ. ಜಿ. ಗಾಳಿ ಅವರನ್ನು ತುರ್ತಾಗಿ ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ. ಈ ಹೈವೋಲ್ಟೇಜ್ ಮೀಟಿಂಗ್ ಬರೋಬ್ಬರಿ 3 ಗಂಟೆಗಳ ಕಾಲ ನಡೆದಿದ್ದು, ಇಡಿ ಅಧಿಕಾರಿಗಳು ದಾಳಿಯ ಸಂದರ್ಭದಲ್ಲಿ ಪರಿಶೀಲಿಸಿದ ಹಣಕಾಸಿನ ವಹಿವಾಟುಗಳು, ಜಪ್ತಿ ಮಾಡಲಾದ ದಾಖಲೆಗಳು, ಇಡಿ ಅಧಿಕಾರಿಗಳ ಮುಂದಿನ ನೋಟಿಸ್ ಹಾಗೂ ವಿಚಾರಣೆಯನ್ನು ಹೇಗೆ ಎದುರಿಸಬೇಕು ಮತ್ತು ಮುಂದೆ ಎದುರಾಗಬಹುದಾದ ಕಾನೂನು ಸಂಕಷ್ಟಗಳಿಂದ ಪಾರಾಗುವುದು ಹೇಗೆ ಎಂಬ ಬಗ್ಗೆ ಆಡಿಟರ್ ಪಿ. ಜಿ. ಗಾಳಿ ಅವರಿಂದ ಮಂಜುನಾಥ್ ಮಹತ್ವದ ಲೆಕ್ಕಾಚಾರದ ಸಲಹೆಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಸತತ 3 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಸಿಎ ಪಿ. ಜಿ. ಗಾಳಿ ಅವರು ಮಂಜುನಾಥ್ ನಿವಾಸದಿಂದ ವಾಪಸ್ ಆಗಿದ್ದು, ಇಡಿ ದಾಳಿಯ ಬೆನ್ನಲ್ಲೇ ನಡೆದಿರುವ ಈ ಆಡಿಟರ್ ಭೇಟಿ ಹಾಗೂ ವೈ. ಮಂಜುನಾಥ್ ಅವರ ಮುಂದಿನ ನಡೆ ಈಗ ಬೆಳಗಾವಿ ರಾಜಕೀಯ, ಉದ್ಯಮ ವಲಯ ಸೇರಿದಂತೆ ಇಡೀ ರಾಜ್ಯದ ಕಣ್ಣು ಬೆಳಗಾವಿಯತ್ತ ನೆಡುವಂತೆ ಮಾಡಿದ್ದು ಭಾರೀ ಕುತೂಹಲ ಮೂಡಿಸಿದೆ.
