ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾರಾಣಿ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಪಲ್ಲಕ್ಕಿ ಉತ್ಸವ ಮಂಗಳವಾರ ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿತು.

ಸುಳೇಭಾವಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೆ ಒಮ್ಮೆ ನಡೆಯುವ ಶ್ರೀ ಮಹಾರಾಣಿ ದೇವಿ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ಆಶೀರ್ವಾದ ಪಡೆದರು. ಜಾತ್ರೆ ನಿಮಿತ್ತ ನಡೆದ ಪಲ್ಲಕ್ಕಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಲಾಯಿತು. ಪಲ್ಕಕ್ಕಿ ಹೊತ್ತ ಭಕ್ತರು ದೇವಿಯ ಜೈಕಾರ ಮೊಳಗಿಸಿದರು.

ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ, ಶ್ರೀ ಯಲ್ಲಮ್ಮ ದೇವಿ, ಶ್ರೀ ಬನಶಂಕರಿ ದೇವಿ ಸೇರಿದಂತೆ ವಿವಿಧ ದೇವರಿಗೆ ಉಡಿ ತುಂಬಲಾಯಿತು. ನಂತರ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನಕ್ಕೆ ಆಗಮಿಸಲಾಯಿತು. ಮಹಿಳೆಯರು ಆರತಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಜಾತ್ರಾ ಮಹೋತ್ಸವದ ವೈಭವ ಹೆಚ್ಚಿಸಿದರು.

ಜಾತ್ರೆ ನಿಮಿತ್ತ ದೇವಸ್ಥಾನವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಬೆಳಗ್ಗೆಯಿಂದಲೇ ಭಕ್ತರು ದೇವರ ದರ್ಶನ ಮಾಡಿ ಆಶೀರ್ವಾದ ಪಡೆದರು. ಧಾರ್ಮಿಕ ಕಾರ್ಯಕ್ರಮಗಳು, ಪೂಜೆ-ಪುನಸ್ಕಾರಗಳು ನಡೆದವು. ತಾಳ ಮೃದಂಗಗಳ ನಾದಕ್ಕೆ ಭಕ್ತರು ಭಕ್ತಿ ಗೀತೆಗಳನ್ನು ಹಾಡುತ್ತ ದೇವರ ನಾಮಸ್ಮರಣೆಯಲ್ಲಿ ತೊಡಗಿದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಂತರ ವಿವಿಧ ಮನರಂಜನಾ ಕಾರ್ಯಕ್ರಮಗಳು ನೆರವೇರಿದವು.
ಶ್ರೀ ಮಹಾರಾಣಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಶಿವಾಜಿ ಹುಂಕ್ರಿಪಾಟೀಲ, ಕಾರ್ಯದರ್ಶಿ ಅಣ್ಣಪ್ಪ ಪಾಟೀಲ, ಸದಸ್ಯರಾದ ಬಸನಗೌಡ ಹುಂಕ್ರಿಪಾಟೀಲ, ಯಮನಪ್ಪ ರಾವುಳಗೌಡ್ರ, ರಾಮಚಂದ್ರ ಹುಂಕ್ರಿಪಾಟೀಲ, ವಿಠ್ಠಲ ನಿಂಗನಗೌಡ್ರ, ಅಪ್ಪಣ್ಣ ಹುಂಕ್ರಿಪಾಟೀಲ, ಸದಾಶಿವ ಲಖನಗೌಡ್ರ, ಶಂಕರ ನಗಾರಿ, ನಾಗಪ್ಪ ನಗಾರಿ ಸೇರಿದಂತೆ ಇತರರು ಇದ್ದರು.
