Belagavi

ಬೆಳಗಾವಿಯಲ್ಲಿ 15 ದಿನಗಳ ಅಭಿನಯ ಸಹಿತ ರಂಗಸಂಗೀತ ತರಬೇತಿ ಶಿಬಿರ

Share

ಕರ್ನಾಟಕ ವೃತ್ತಿ ರಂಗಭೂಮಿ ರಂಗಾಯಣವು ಜುಲೈ ತಿಂಗಳಲ್ಲಿ ಬೆಳಗಾವಿಯಲ್ಲಿ 15 ದಿನಗಳ ಅಭಿನಯ ಸಹಿತ ರಂಗಸಂಗೀತ ತರಬೇತಿ ಶಿಬಿರವನ್ನು ಆಯೋಜಿಸಲು ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಿಬಿರದ ರೂಪುರೇಷೆ, ತರಬೇತಿಯ ವಿಷಯಗಳು ಹಾಗೂ ಸಂಘಟನಾ ವ್ಯವಸ್ಥೆಗಳ ಕುರಿತು ಸಮಗ್ರವಾಗಿ ಚರ್ಚಿಸಿ ಅಂತಿಮಗೊಳಿಸಲಾಯಿತು.
ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿದರು.

ಇನ್ನು ಡಿ ಎಸ್ ಚೌಗುಲೆ ಅವರು ದಾವಣಗೆರೆ ಹಾಗೂ ಮೈಸೂರಿನಲ್ಲಿ ಯಶಸ್ವಿಯಾಗಿ ನಡೆದ ತರಬೇತಿ ಶಿಬಿರಗಳ ಮಾದರಿಯಲ್ಲೇ ಬೆಳಗಾವಿಯಲ್ಲೂ ಗುಣಮಟ್ಟದ ಶಿಬಿರವನ್ನು ನಡೆಸಿ ಹೊಸ ಪ್ರತಿಭೆಗಳನ್ನು ರಂಗಭೂಮಿಗೆ ಪರಿಚಯಿಸಲಾಗುವುದು ಎಂದು ತಿಳಿಸಿದರು. Byte

ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಸಾಹಿತಿ ಬಿ.ಎಸ್. ಗವಿಮಠ ಮಾತನಾಡಿ, ಬೆಳಗಾವಿ ಜಿಲ್ಲೆಯು ರಂಗಸಂಗೀತದ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಈ ಕಲೆಯನ್ನು ಯುವ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಯ.ರು. ಪಾಟೀಲ್ ಮಾತನಾಡಿ, ರಂಗಭೂಮಿ ಕೇವಲ ಮನರಂಜನೆಯ ಮಾಧ್ಯಮವಲ್ಲ; ಅದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಹೆಚ್ಚಿನ ಯುವ ಕಲಾವಿದರು ಶಿಬಿರದಲ್ಲಿ ಭಾಗವಹಿಸಿ ಈ ಕಲೆಯನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.
ಸಂಗೀತ ವಿದ್ವಾಂಸ ಪಂ. ರಾಜಗುರು ದೋತ್ರೆ ಮಾತನಾಡಿ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ನೆಲೆಗಟ್ಟಿನಲ್ಲಿ ರಂಗಸಂಗೀತದ ವಿಶೇಷ ತರಬೇತಿ ನೀಡಲಾಗುವುದು. ಈ ಶಿಬಿರವು ಯುವ ಕಲಾವಿದರಿಗೆ ಅಪರೂಪದ ಅವಕಾಶವಾಗಲಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ್ ಮಾತನಾಡಿ, ರಂಗಭೂಮಿ ಹಾಗೂ ರಂಗಸಂಗೀತದ ಉಳಿವಿಗೆ ಇಂತಹ ತರಬೇತಿ ಶಿಬಿರಗಳು ಅತ್ಯಂತ ಅಗತ್ಯವಾಗಿದ್ದು, ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಸಭೆಯಲ್ಲಿ ಶ್ರೀ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಬಿ. ಹಿಮ್ಮಡಿ, ಶಾಂತ ಆಚಾರ್ಯ, ರವಿ ಕೊಟರಗಸ್ತಿ, ಡಿ.ಎಸ್. ಚೌಗಲೆ, ಬಸವರಾಜ ಗಾರ್ಗಿ, ಬಾಬಾಸಾಹೇಬ್ ಕಾಂಬ್ಳೆ, ಗುರುನಾಥ ಕುಲಕರ್ಣಿ, ಏಣಗಿ ಸುಭಾಸ್, ಶಿಬಿರ ಸಂಯೋಜಕ ಹಾಗೂ ರಂಗಾಯಣದ ವಿಶೇಷ ಅಧಿಕಾರಿ ಎನ್. ನಟರಾಜ್ ಸೇರಿದಂತೆ ಸಾಹಿತಿಗಳು, ರಂಗಕಲಾವಿದರು, ಸಂಗೀತ ವಿದ್ವಾಂಸರು ಹಾಗೂ ಆಸಕ್ತರು ಉಪಸ್ಥಿತರಿದ್ದು, ಶಿಬಿರದ ಯಶಸ್ವಿ ಆಯೋಜನೆಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಪ್ರಾರಂಭದಲ್ಲಿ ಶಿಬಿರ ಸಂಯೋಜಕ ನಟರಾಜ್ ಸ್ವಾಗತಿಸಿದರು, ಕೊನೆಯಲ್ಲಿ ವೃತ್ತಿ ರಂಗಭೂಮಿ ರಂಗಾಯಣದ ವಿಶೇಷ ಅಧಿಕಾರಿ ರವಿ ಚಂದ್ರ ವಂದಿಸಿದರು

Tags:

error: Content is protected !!