ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ. ಜನರು ಹನಿ ನೀರಿಗೂ ಪರದಾಡುತ್ತಿರುವ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ, ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯದಿಂದಾಗಿ ಸಾವಿರಾರು ಲೀಟರ್ ಅಮೂಲ್ಯವಾದ ಕುಡಿಯುವ ನೀರು ರಸ್ತೆ ಪಾಲಾಗುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.


ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿ ಪೈಪ್‌ಲೈನ್‌ನಲ್ಲಿ ಏರ್ ಹಿಡಿದ ನೀರು ತೆಗೆಯುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಈ ವೇಳೆ ಯಾವುದೇ ಮುನ್ನೆಚ್ಚರಿಕೆ ವಹಿಸದ ಕಾರಣ ಸಾವಿರಾರು ಲೀಟರ್ ಕುಡಿಯುವ ನೀರು ರಸ್ತೆಯುದ್ದಕ್ಕೂ ಹರಿದು ಪೋಲಾಗುತ್ತಿದೆ. ಜಿಲ್ಲೆಯ ಹಲವೆಡೆ ಭೀಕರ ಬರಗಾಲವಿದ್ದು, ಸಾರ್ವಜನಿಕರು ಕೊಡಪಾನ ಹಿಡಿದು ಮೈಲಿಗಟ್ಟಲೆ ಅಲೆಯುವ ಪರಿಸ್ಥಿತಿ ಇದೆ. ಹೀಗಿರುವಾಗ ಕಣ್ಣೆದುರೇ ಇಷ್ಟೊಂದು ಪ್ರಮಾಣದ ನೀರು ಪೋಲಾಗುತ್ತಿರುವುದನ್ನು ಕಂಡು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ನೀರು ಪೋಲಾಗುವುದನ್ನು ತಡೆಯಬೇಕು ಹಾಗೂ ಇಂತಹ ಬೇಜವಾಬ್ದಾರಿತನ ಪ್ರದರ್ಶಿಸಿದ ಕಂಪನಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
