ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಭೀಕರ ಕೊಲೆ ಪ್ರಕರಣದ ಬೆನ್ನಟ್ಟಿದ ಪೊಲೀಸರು, ಕೇವಲ 24 ಗಂಟೆಗಳಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಆರು ಜನ ಆರೋಪಿತರನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಮಾಧ್ಯಮಗೋಷ್ಟಿ ನಡೆಸಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ದಿನಾಂಕ 20/06/2026 ರಂದು ತಡರಾತ್ರಿ ಸಂಕೇಶ್ವರದ ಗೋರಕ್ಷಣಮಾಳದ ರಮೇಶ ದುಡುಮ ಅವರ ಮನೆಯ ಹತ್ತಿರ ಬಾಬು ಶಂಕರ ಭೂಸಗೋಳ ಎಂಬುವವರನ್ನು ಕುಡಗೋಲು, ಕಬ್ಬಿಣದ ರಾಡ್ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಮೃತನ ಹೆಂಡತಿ ಪೂಜಾ ಬಾಬು ಬೂಸಗೋಳ ನೀಡಿದ ದೂರಿನನ್ವಯ ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತ ಬಾಬು ಭೂಸಗೋಳನು ಆರೋಪಿತ ಸುಬ್ಬರಾವನ ಹೆಂಡತಿ ವರ್ಷಾಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ಹಿನ್ನೆಲೆ ಹಾಗೂ ಕಳೆದ ಪುರಸಭೆ ಉಪಚುನಾವಣೆಯಲ್ಲಿ ಮರಡಿ ಕುಟುಂಬದ ವಿರುದ್ಧ ಕೆಲಸ ಮಾಡಿದ್ದಕ್ಕೆ ಹಳೇ ದ್ವೇಷ ಸಾಧಿಸಿ ಈ ಕೃತ್ಯ ಎಸಗಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.
ಈ ಕೊಲೆ ಪ್ರಕರಣದ ಆರೋಪಿತರಾದ ಸುಬ್ಬರಾವ @ ಶುಭಂ ಅನಂತ ಬಿಸೂರೆ, ಅಕ್ಷಯ ಬಾಬಾಸಾಹೇಬ ಮರಡಿ, ಪವನ ಶ್ರೀಧರ ಮರಡಿ, ಅನೀಲ ಬಾಳಾಸಾಹೇಬ ಮರಡಿ, ಸಂದೀಪ ಅಪ್ಪಾಸಾಹೇಬ ಮರಡಿ ಹಾಗೂ ಅಭಿಷೇಕ ಬಸವರಾಜ ಅಲದಾಳೆ ಎಂಬ ಆರೂ ಜನರನ್ನು ಪೊಲೀಸರು ದಿನಾಂಕ 21-06-2026 ರಂದು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬೆಳಗಾವಿ ಎಸ್ಪಿ ಕೆ. ರಾಮರಾಜನ್, ಹೆಚ್ಚುವರಿ ಎಸ್ಪಿ ಆರ್. ಬಿ. ಬಸರಗಿ ಹಾಗೂ ಗೋಕಾಕ ಡಿಎಸ್ಪಿ ರವಿ ಡಿ. ನಾಯ್ಕ ಅವರ ಮಾರ್ಗದರ್ಶನದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಸಂಕೇಶ್ವರ ಪಿಐ ಗಣಪತಿ ಬಿ. ಕೊಂಗನೊಳ್ಳಿ, ಪಿಎಸ್ಐಗಳಾದ ವೈ. ಐ. ನಾಯಕ, ಯು. ಎಸ್. ಶೆಟ್ಟೆನ್ನವರ, ಎಎಸ್ಐಗಳಾದ ಎಲ್. ಎಸ್. ಖೋತ, ಸಿ. ಜೆ. ಸಾರಾಪೂರೆ ಹಾಗೂ ಸಿಬ್ಬಂದಿಗಳಾದ ಬಿ. ಕೆ. ನಾಗನೂರಿ, ಎಸ್. ಎಲ್. ಗಳತಗಿ, ಬಿ. ಬಿ. ಮುರ್ಕಿಭಾವಿ, ಕೆ. ಡಿ. ಹಿರೇಮಠ, ಎಸ್. ಬಿ. ಪೂಜೇರಿ, ಎಸ್. ಎಮ್. ಯಕ್ಸಂಬಿ, ಎಸ್. ಐ. ಘೋರಿ, ವಿ. ಜಿ. ಕುಡ್ಡಗೋಳ, ಎಮ್. ಕೆ. ಅತ್ತಾರ, ಅಲ್ಲಾಭಕ್ಷ ಮುಲ್ಲಾ, ಎಮ್. ಎಫ್. ನದಾಫ, ಎಸ್. |ಎನ್. ಅಕ್ಕಿ ಹಾಗೂ ಟೆಕ್ನಿಕಲ್ ಸೆಲ್ನ ವಿನೋದ ಠಕ್ಕನ್ನವರ, ಸಚೀನ ಪಾಟೀಲ ಪಾಲ್ಗೊಂಡಿದ್ದು, ಇವರ ಕಾರ್ಯವನ್ನು ಎಸ್ಪಿ ಸಾಹೇಬರು ಶ್ಲಾಘಿಸಿದ್ದಾರೆ.
