Chikkodi

ಪಡಿತರ ಅಕ್ಕಿ ಕಳ್ಳಸಾಗಣೆ ದಂಧೆ ಪತ್ತೆ; ಇಬ್ಬರ ಬಂಧನ, 9 ಲಕ್ಷ ರೂ. ಮೌಲ್ಯದ ಅಕ್ಕಿ ವಶ

Share

ಬಡವರಿಗಾಗಿ ಪಡಿತರ ಚೀಟಿ ಮೂಲಕ ವಿತರಿಸಲಾಗುವ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ಅದನ್ನು ಹೆಚ್ಚಿನ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಬೃಹತ್ ದಂಧೆಯನ್ನು ನಿಪ್ಪಾಣಿಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು,
ಅನ್ನ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಅಭಿಜೀತ್ ಗಾಯಕ್ವಾಡ್ ಅವರ ನೇತೃತ್ವದ ತಂಡಕ್ಕೆ ರೇಷನ್ ಅಕ್ಕಿ ಕಳ್ಳಸಾಗಣೆಯಾಗುತ್ತಿರುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ನಿಪ್ಪಾಣಿಯ ಹಿದಾಯತ್‌ನಗರ ಮತ್ತು ಶಿರಗುಪ್ಪಿ-ಪಾಂಗಿರ ರಸ್ತೆಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದರು.

ದಾಳಿಯ ವೇಳೆ ಹಿದಾಯತ್‌ನಗರದ ಗಾಂಧಿ ಚೌಕ್ ನಿವಾಸಿ ಸೊಹೇಲ್ ಆಲಂ ದಲಾಯತ್ (35) ಎಂಬಾತನ ಗೋದಾಮಿನಲ್ಲಿದ್ದ 50 ಮೂಟೆ ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಹಾಗೆಯೇ ಶಿರಗುಪ್ಪಿ-ಪಾಂಗಿರ ರಸ್ತೆಯಲ್ಲಿ ಸಾಗಣೆಯಾಗುತ್ತಿದ್ದ ಲಾರಿ ಒಂದನ್ನು ತಡೆದು ತಪಾಸಣೆ ನಡೆಸಿದಾಗ ಸಂದೀಪ್ ಬಾಳಾಸಾಹೇಬ್ ಗಂಗಾಳೆ ಎಂಬಾತನ ಬಳಿ ಇದ್ದ 104 ಮೂಟೆ ಅಕ್ಕಿ ಪತ್ತೆಯಾಗಿದೆ. ಒಟ್ಟು 154 ಮೂಟೆ ಅಕ್ಕಿ ಹಾಗೂ ಕಳ್ಳಸಾಗಣೆಗೆ ಬಳಸುತ್ತಿದ್ದ ಲಾರಿ ಸೇರಿದಂತೆ ಸುಮಾರು 9 ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆಹಾರ ನಿರೀಕ್ಷಕ ಅಭಿಜೀತ್ ಗಾಯಕ್ವಾಡ್ ಅವರೊಂದಿಗೆ ಇಲಾಖೆಯ ಸಿಬ್ಬಂದಿ ಆಕಾಶ್ ಘುಗ್ರೆ, ನಿಪ್ಪಾಣಿ ಬಸವೇಶ್ವರ ಪೊಲೀಸ್ ಠಾಣೆಯ ಉಪನಿರೀಕ್ಷಕ ರಮೇಶ್ ಪವಾರ ಹಾಗೂ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಸಂಜೀವನಿ ನರಸಪನ್ನವರ್ ಅವರು ಈ ಭರ್ಜರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಹಠಾತ್ ದಾಳಿಯಿಂದಾಗಿ‌ ನಿಪ್ಪಾಣಿ ತಾಲೂಕಿನಲ್ಲಿ ಪಡಿತರ ಅಕ್ಕಿಯ ಕಾಳಸಂತೆ ದಂಧೆಯಲ್ಲಿ ತೊಡಗಿರುವವರಲ್ಲಿ ಭೀತಿ ಆವರಿಸಿದೆ.

ಡಿ.ಕೆ.ಉಪ್ಪಾರ ‌ಇನ್ ನ್ಯೂಸ ಚಿಕ್ಕೋಡಿ

Tags:

error: Content is protected !!