ಚಿಕ್ಕೋಡಿಯ ಸಿಟಿಇ ಸಂಸ್ಥೆಯ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ನಿಜವಾದ ಸಾರ್ವತ್ರಿಕ ಚುನಾವಣೆಯನ್ನೇ ಹೋಲುವಂತಹ ಮತದಾನ ಪ್ರಕ್ರಿಯೆ ನಡೆಯಿತು. ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲೇ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಚುನಾವಣಾ ವ್ಯವಸ್ಥೆಯನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ..

-ಇದು ಯಾವುದೇ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯ ದೃಶ್ಯವಲ್ಲ. ಚಿಕ್ಕೋಡಿಯ ಪ್ರತಿಷ್ಠಿತ ಸಿಟಿಇ ಸಂಸ್ಥೆಯ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ನಡೆದ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆಯ ಚುನಾವಣಾ ಪ್ರಕ್ರಿಯೆ. ಭವಿಷ್ಯದ ಪ್ರಜೆಗಳಾದ ಇಂದಿನ ವಿದ್ಯಾರ್ಥಿಗಳಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಪ್ರಜಾಪ್ರತಿನಿಧಿಗಳ ಆಯ್ಕೆಯ ಜವಾಬ್ದಾರಿಯನ್ನು ಪ್ರಾಯೋಗಿಕವಾಗಿ ತಿಳಿಸಿಕೊಡುವುದು ಈ ಚುನಾವಣೆಯ ಮುಖ್ಯ ಉದ್ದೇಶವಾಗಿತ್ತು. ಈ ವಿಶೇಷ ಕಾರ್ಯಕ್ರಮಕ್ಕೆ ಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿಗಳಾದ ಡಾ. ಮಿಥುನ ದೇಶಪಾಂಡೆಯವರು ಚಾಲನೆ ನೀಡಿದರು. ಮತಗಟ್ಟೆಯನ್ನು ಉದ್ಘಾಟಿಸಿ, ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪ್ರಕ್ರಿಯೆಗೆ ಅಧಿಕೃತ ಮುದ್ರೆ ಒತ್ತಿದರು.


ಈ ಬಾರಿಯ ಚುನಾವಣೆಯ ಮತ್ತೊಂದು ವಿಶೇಷವೆಂದರೆ ತಂತ್ರಜ್ಞಾನದ ಬಳಕೆ. ಶಾಲೆಯ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿತ್ತು. ಸಾಂಪ್ರದಾಯಿಕ ಬ್ಯಾಲೆಟ್ ಪೇಪರ್ ಬದಲಾಗಿ, ಡಿಜಿಟಲ್ ಯುಗಕ್ಕೆ ತಕ್ಕಂತೆ ಮೊಬೈಲ್ ಇವಿಎಂ’ (EVM) ಮತಯಂತ್ರದ ಮೂಲಕ ಮಕ್ಕಳು ಅತ್ಯಂತ ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಇದು ವಿದ್ಯಾರ್ಥಿಗಳಿಗೆ ಆಧುನಿಕ ಮತದಾನ ಪ್ರಕ್ರಿಯೆಯ ನೇರ ಅನುಭವವನ್ನು ನೀಡಿತು.
ಬಳಿಕ ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಕುಮಾರ ಮಂಜುನಾಥ ವಡ್ಡರ ಹಾಗೂ ವಿದ್ಯಾರ್ಥಿನಿಯರ ಪ್ರತಿನಿಧಿಯಾಗಿ ಕುಮಾರಿ ಅದಿತಿ ಅಲಾಸೆ ಭರ್ಜರಿ ಜಯಗಳಿಸಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಪ್ರಾಶುಂಪಾಲರಾದ ಅನೀತಾ ಜೋಶಿಯವರು, ವಿದ್ಯಾರ್ಥಿಗಳಲ್ಲಿ ಚುನಾವಣಾ ಸಾಕ್ಷರತೆ ಮೂಡಿಸಲು ಇದು ಸಹಕಾರಿ ಎಂದರು.

ಕೇವಲ ಹಿರಿಯರಿಗಷ್ಟೇ ಸೀಮಿತ ಅಂದುಕೊಂಡಿದ್ದ ಚುನಾವಣಾ ಪ್ರಕ್ರಿಯೆಯನ್ನು ಶಾಲಾ ಆವರಣಕ್ಕೆ ತಂದು, ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಸಹಶಿಕ್ಷಕರಾದ ರಾಚಪ್ಪ ಮಗದುಮ್ಮ ಅವರು ಮಾತನಾಡಿ ಪ್ರಜಾಪ್ರಭುತ್ವದ ನೈಜ ಮೌಲ್ಯಗಳನ್ನು ತಿಳಿಸುವುದೇ ಇದರ ಹಿಂದಿನ ಆಶಯ ಎಂದರು.
ಒಟ್ಟಿನಲ್ಲಿ, ಮೊಬೈಲ್ ಇವಿಎಂ ತಂತ್ರಜ್ಞಾನದ ಬಳಕೆಯೊಂದಿಗೆ ಅತ್ಯಂತ ಪಾರದರ್ಶಕ ಹಾಗೂ ರೋಮಾಂಚನಕಾರಿಯಾಗಿ ನಡೆದ ಈ ಚುನಾವಣೆ ಚಿಕ್ಕೋಡಿಯ ಸಿಟಿಇ ಶಾಲೆಯ ವಿದ್ಯಾರ್ಥಿಗಳಿಗೆ ಒಂದು ಮರೆಯಲಾಗದ ಅನುಭವವನ್ನು ನೀಡಿದ್ದಂತೂ ಸುಳ್ಳಲ್ಲ. ಭವಿಷ್ಯದ ಪ್ರಬುದ್ಧ ಮತದಾರರನ್ನು ಸೃಷ್ಟಿಸುವ ಇಂತಹ ಪ್ರಯತ್ನಗಳು ಎಲ್ಲೆಡೆ ನಡೆಯಲಿ ಎಂಬುದೇ ನಮ್ಮ ಆಶಯ.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ.
