ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ದೇಶಿಸಿರುವ ವಿದ್ಯುತ್ ಖಾಸಗೀಕರಣ ನೀತಿಯನ್ನು ಕೈಬಿಡಬೇಕೆಂದು ಆಗ್ರಹಿಸಿ, ಚಿಕ್ಕೋಡಿ ಬಸವ ವೃತ್ತದಲ್ಲಿ ನೂರಾರು ರೈತರು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿದರು.

ಸುಮಾರು ಅರ್ಧ ಗಂಟೆಯ ಕಾಲ ರಸ್ತೆ ತಡೆ ನಡೆಸಿದ ರೈತರು, ಮಾನವ ಸರಪಳಿ ನಿರ್ಮಿಸಿ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಅವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.


ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಸತ್ಯಪ್ಪ ಮಲ್ಲಾಪೂರೆ, ಒಂದು ವೇಳೆ ಸರ್ಕಾರ ವಿದ್ಯುತ್ ಖಾಸಗೀಕರಣವನ್ನು ಜಾರಿಗೆ ತಂದಿದ್ದೇ ಆದಲ್ಲಿ, ಮುಂದಿನ ದಿನಗಳಲ್ಲಿ ಗುರ್ಲಾಪೂರ ಮಾದರಿಯಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದುಎಂದು ಎಚ್ಚರಿಕೆ ನೀಡಿದರು.
ಚಿಕ್ಕೋಡಿ ತಾಲೂಕಾಧ್ಯಕ್ಷ ಮನೋಜ ಮನಗೂಳಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ತೀವ್ರ ಬರಗಾಲ ಎದುರಾಗಿದ್ದು, ರೈತರು ಈಗಾಗಲೇ ತತ್ತರಿಸಿಹೋಗಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸಿದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಮತ್ತು ಅವರಿಗೆ ಬಹಳಷ್ಟು ತೊಂದರೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲಪ್ಪ ಅಂಗಡಿ, ಆನಂದ ಪಾಶ್ಚಾಪೂರೆ, ರವೀಂದ್ರ ಕುಂಭೋಜಿ, ಮಾಳಾಪ್ಪಾ ತಮದಂಟಿ, ಸತ್ಯಪ್ಪ ಬಸಗೌಡನ್ನವರ, ಕೃಷ್ಣಾ ಕಮತ್ಯಾನಟ್ಟಿ, ಸಿದ್ದರಾಮ ದಿವೋಜಿ, ಸಚಿನ ಕುಲಕರ್ಣಿ, ಭರಮಣ್ಣಾ ಜೂಲಪೆ, ಬಾಳೇಶ ಚನ್ನವರ, ಗಜಾನನ ಪೂಜಾರಿ, ಏಕನಾಥ ನಾಯಿಕ, ಸಹದೇವ ಚಿಮ್ಮಟ ಸೇರಿದಂತೆ ಮುಂತಾದ ಮುಖಂಡರು ಹಾಗೂ ಭಾಗದ ನೂರಾರು ರೈತರು ಉಪಸ್ಥಿತರಿದ್ದು ಹೋರಾಟಕ್ಕೆ ಬೆಂಬಲ ಸೂಚಿಸಿದರು.
