ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿದ್ಯುತ್ ಖಾಸಗೀಕರಣ ನೀತಿಯನ್ನು ತೀವ್ರವಾಗಿ ವಿರೋಧಿಸಿ ಜೂನ್ 19 ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಚಿಕ್ಕೋಡಿ ತಹಶೀಲ್ದಾರ್ ರಾಜೇಶ ಬುರ್ಲಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರಿಗೆ ಜಂಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಚಿಕ್ಕೋಡಿ ತಾಲೂಕಾಧ್ಯಕ್ಷ ಮನೋಜ ಮನಗೂಳಿ ಹೇಳಿದರು.

ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಜರುಗಿದ ರೈತರ ಮಹತ್ವದ ಸಭೆಯಲ್ಲಿ ಈ ಕುರಿತು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾ ಉಪಾಧ್ಯಕ್ಷ ಕಲಗೌಡ ಪಾಟೀಲ ಅವರು ಮಾತನಾಡಿ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವುದರಿಂದ ರೈತ ಸಮುದಾಯಕ್ಕೆ ಭಾರೀ ಅನ್ಯಾಯವಾಗಲಿದೆ. ಸರ್ಕಾರದ ಈ ಜನವಿರೋಧಿ ಹಾಗೂ ರೈತವಿರೋಧಿ ನೀತಿಗೆ ರೈತರ ಸಂಪೂರ್ಣ ವಿರೋಧವಿದೆ. ಯಾವುದೇ ಕಾರಣಕ್ಕೂ ವಿದ್ಯುತ್ ಕ್ಷೇತ್ರವನ್ನು ಖಾಸಗಿ ಕಂಪನಿಗಳ ಕೈಗೆ ಒಪ್ಪಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಜಿಲ್ಲಾ ಗೌರವಾಧ್ಯಕ್ಷ ಗೋಪಾಲ ಕೊಕನೂರ ಅವರು ಮಾತನಾಡಿ, ವಿದ್ಯುತ್ ಖಾಸಗೀಕರಣದ ವಿರುದ್ಧ ನಮ್ಮ ಧ್ವನಿ ಪ್ರಬಲವಾಗಿ ಧ್ವನಿಸಬೇಕಿದೆ. ಹೀಗಾಗಿ ಜೂನ್ 19 ರಂದು ಹಮ್ಮಿಕೊಂಡಿರುವ ಮನವಿ ಸಲ್ಲಿಕೆ ಕಾರ್ಯಕ್ರಮಕ್ಕೆ ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಂದು ಭಾಗವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಆನಂದ ಪಾಶ್ಚಾಪೂರೆ, ರವೀಂದ್ರ ಕುಂಭೋಜಿ, ಮಾಳಾಪ್ಪಾ ತಮದಂಟಿ, ಸತ್ಯಪ್ಪ ಬಸಗೌಡನ್ನವರ, ಕೃಷ್ಣಾ ಕಮತ್ಯಾನಟ್ಟಿ, ಸಿದ್ದರಾಮ ದಿವೋಜಿ, ಸಚಿನ ಕುಲಕರ್ಣಿ, ಭರಮಣ್ಣಾ ಜೂಲಪೆ, ಬಾಳೇಶ ಚನ್ನವರ, ಗಜಾನನ ಪೂಜಾರಿ, ಏಕನಾಥ ನಾಯಿಕ, ಸಹದೇವ ಚಿಮ್ಮಟ ಸೇರಿದಂತೆ ಮುಂತಾದ ಪ್ರಮುಖರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು.
