ಬೆಳಗಾವಿ ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹೆದ್ದಾರಿ ಬಳಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಪತ್ತೆಹಚ್ಚಿದ್ದಾರೆ. ರಾಜಸ್ಥಾನದಿಂದ ತಂದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಫೀಮನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ 18/06/2026 ರಂದು ಬೆಳಗಾವಿಯ ಹಿಂಡಲಗಾ ಫ್ಯಾಕ್ಟರಿ ಸಮೀಪದ ಎನ್.ಹೆಚ್ 48 ಹೆದ್ದಾರಿಯ ಸರ್ವಿಸ್ ರಸ್ತೆ ಹತ್ತಿರ ಸಿಸಿಬಿ ವಿಭಾಗದ ಪಿಐ ಮಂಜುನಾಥ ನಾಯಕ ಹಾಗೂ ಸಿಬ್ಬಂದಿಯವರು ಮಿಂಚಿನ ದಾಳಿ ನಡೆಸಿದ್ದಾರೆ. ರಾಜಸ್ಥಾನದ ಪಾಲಿಯಿಂದ ಸ್ವಂತ ಲಾಭಕ್ಕಾಗಿ ಅಫೀಮು ಎಂಬ ಮಾದಕ ವಸ್ತುವನ್ನು ತಂದು, ಬೆಂಗಳೂರಿನ ಖೇತಾರಾಮ ಚೌಧರಿ ಎಂಬಾತನಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ರಾಜಸ್ಥಾನ ಮೂಲದ ಆರೋಪಿ ಶುಭಂ ಮದನಲಾಲ ಶರ್ಮಾ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 5,00,000 ರೂಪಾಯಿ ಮೌಲ್ಯದ 1.048 ಕಿಲೋ ಗ್ರಾಂ ಬ್ಲ್ಯಾಕ್ ಕಲರ್ ಆಕ್ಸಿಡೆಡ್ ಅಫೀಮು ಹಾಗೂ 50,000 ರೂಪಾಯಿ ಮೌಲ್ಯದ ಐಫೋನ್-14 ಪ್ಲಸ್ ಮೊಬೈಲ್ ಸೇರಿದಂತೆ ಒಟ್ಟು 5,50,000 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಇಬ್ಬರು ಆರೋಪಿಗಳ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಯಶಸ್ವಿ ದಾಳಿ ನಡೆಸಿದ ಇಡೀ ತಂಡದ ಕಾರ್ಯವನ್ನು ಬೆಳಗಾವಿ ನಗರದ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

