ಬೆಳಗಾವಿ ನಗರದ ರಿಸಾಲ್ದಾರ್ ಗಲ್ಲಿಯಲ್ಲಿರುವ ಹಳೆಯ ಮಹಾನಗರ ಪಾಲಿಕೆ ಕಟ್ಟಡದ ‘ಬೆಲಗಾಮ್ ಒನ್’ (ಕರ್ನಾಟಕ ಒನ್) ಕೇಂದ್ರ ಸಾರ್ವಜನಿಕರ ಪಾಲಿಗೆ ನರಕಸದೃಶವಾಗಿದೆ. ಇಲ್ಲಿ ನಡೆಯುತ್ತಿರುವ ಆಮೆಗತಿಯ ಅಭಿವೃದ್ಧಿ ಕಾಮಗಾರಿಯಿಂದಾಗಿ ಪ್ರತಿದಿನ ಕಚೇರಿಗೆ ಬರುವ ನೂರಾರು ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಶೀಘ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬೆಳಗಾವಿ ಒನ್ ಕೇಂದ್ರಕ್ಕೆ ಪ್ರತಿದಿನ ಕರೆಂಟ್ ಬಿಲ್ ಪಾವತಿಸಲು, ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಹಾಗೂ ಇನ್ನಿತರ ಸೇವೆಗಳಿಗಾಗಿ ನೂರಾರು ಜನರು ಭೇಟಿ ನೀಡುತ್ತಾರೆ. ಆದರೆ, ಕಚೇರಿಯಲ್ಲಿ ನವೀಕರಣ ಕಾಮಗಾರಿ ನೆಪದಲ್ಲಿ ಅಭಿವೃದ್ಧಿ ವಸ್ತುಗಳು ಮತ್ತು ಕಸದ ರಾಶಿಯನ್ನು ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಹಾಕಲಾಗಿದೆ. ಇಡೀ ಕಚೇರಿ ಅಸ್ತವ್ಯಸ್ತವಾಗಿದ್ದು, ದೂರದ ಊರುಗಳಿಂದ ಬರುವ ಜನರಿಗೆ, ವೃದ್ಧರಿಗೆ ಹಾಗೂ ಸಣ್ಣ ಮಕ್ಕಳನ್ನು ಕರೆದುಕೊಂಡು ಬರುವ ಮಹಿಳೆಯರಿಗೆ ಕನಿಷ್ಠ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೂ ಇಲ್ಲದಂತಾಗಿದೆ. ಗಂಟೆಗಟ್ಟಲೆ ನಿಂತುಕೊಂಡೇ ಕೆಲಸ ಮಾಡಿಸಿಕೊಳ್ಳಬೇಕಾದ ದುಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

ಕೇಂದ್ರದ ಈ ಶೋಚನೀಯ ಸ್ಥಿತಿಯ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದು, “ದಿನವಿಡೀ ಕಾಯುವ ನಮಗೆ ಕನಿಷ್ಠ ಕುಡಿಯುವ ನೀರು ಅಥವಾ ಕುಳಿತುಕೊಳ್ಳುವ ವ್ಯವಸ್ಥೆಯೂ ಇಲ್ಲ.. ಇನ್ನಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಮತ್ತು ಕಚೇರಿಗೆ ಬರುವ ನಾಗರಿಕರಿಗೆ ಸೂಕ್ತ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
