ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಮರಗೂರ ಸಕ್ಕರೆ ಕಾರ್ಖಾನೆ ಎದುರು ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ತೆಲಂಗಾಣ ನೋಂದಣಿ ಸಂಖ್ಯೆಯ TS 15 UD 3836 ಟಿಪ್ಪರ್ ವಾಹನದ ಚಾಲಕ ರತ್ನನೇಶ ಯಾದವ್ ರಾಂಗ್ ಸೈಡ್ನಿಂದ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ KA 28 HQ 4724 ಸಂಖ್ಯೆಯ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಅಪಘಾತದ ಪರಿಣಾಮ ಬೈಕ್ ಸವಾರರಾದ ಧರ್ಮಣ್ಣ ಹೊಸಮನಿ ಹಾಗೂ ಭೀರಪ್ಪ ಪೂಜಾರಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಗೋರನಾಳ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗಾಯಗೊಂಡ ಸೋಮಯ್ಯ ಹಿರೇಮಠ ಅವರನ್ನು ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
