ಬೆಳಗಾವಿಯಲ್ಲಿ ಇಂದು ಆಯೋಜಿಸಲಾಗಿದ್ದ ತುರ್ತು ಮಾಧ್ಯಮಗೋಷ್ಟಿಯಲ್ಲಿ ದಲಿತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಸಚಿವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ವಿಡಿಯೋ ಹರಿಬಿಟ್ಟಿರುವ ಮಲ್ಲಿಕಾರ್ಜುನ್ ರಾಶಿಂಗೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಅವರನ್ನು ತಕ್ಷಣವೇ ಕಾಂಗ್ರೆಸ್ ಪಕ್ಷ ಹಾಗೂ ಚಲವಾದಿ ಸಂಘಟನೆಯಿಂದ ಉಚ್ಛಾಟಿಸಬೇಕೆಂದು ಗಡುವು ನೀಡಿದ್ದಾರೆ.
ಇಂದು ಬೆಳಗಾವಿಯಲಕ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡ ಮಲ್ಲೇಶ ಚೌಗಲೆ, ಮಲ್ಲಿಕಾರ್ಜುನ ರಾಶಿಂಗೆ ಒಬ್ಬ ಸ್ವಯಂಘೋಷಿತ ನಾಯಕನಾಗಿದ್ದು, ಸಮಾಜಕ್ಕೆ ಅವರ ಕೊಡುಗೆ ಶೂನ್ಯವಾಗಿದೆ. ಚಲವಾದಿ ನಾಯಕನೆಂದು ಹೇಳಿಕೊಳ್ಳುವ ಅವರು ಹಲವು ಅಧಿಕಾರಿಗಳು ಮತ್ತು ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರು ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ, ಅವರು ರಾಜ್ಯ ಹಾಗೂ ದೇಶದ ಮಟ್ಟದ ಅಹಿಂದ ನಾಯಕರಾಗಿದ್ದಾರೆ. ಸಚಿವರ ಜನಪ್ರಿಯತೆಯನ್ನು ಸಹಿಸಲಾಗದೆ ರಾಶಿಂಗೆ ಇಂತಹ ಕೃತ್ಯ ಎಸಗುತ್ತಿದ್ದು, ನಮ್ಮ ಉಸಿರಿರುವ ತನಕ ಸತೀಶ್ ಜಾರಕಿಹೊಳಿ ಅವರೇ ನಮ್ಮ ನಾಯಕರು. ಅವರಿಗಾಗಿ ಬೀದಿಗಿಳಿದು ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.

ಮತ್ತೊಬ್ಬ ಮುಖಂಡ ಮಹಾವೀರ ಮೋಹಿತೆ ಮಾತನಾಡಿ, ಮಲ್ಲಿಕಾರ್ಜುನ್ ರಾಶಿಂಗೆ ಈ ಹಿಂದೆಯೂ ಹಲವರ ಬಗ್ಗೆ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದು, ಆಗಲೇ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ನಿನ್ನೆ ಬಿಡುಗಡೆಯಾದ ವಿಡಿಯೋದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ತೀವ್ರ ಅವಹೇಳನ ಮಾಡಲಾಗಿದೆ. ನಮಗೂ ಹಾಗೂ ರಾಶಿಂಗೆಗೂ ಯಾವುದೇ ಸಂಬಂಧವಿಲ್ಲ. ರಾಜ್ಯ ಮತ್ತು ದೇಶ ಮಟ್ಟದಲ್ಲಿ ಬೆಳೆಯುತ್ತಿರುವ ದಲಿತ ನಾಯಕರನ್ನು ಹತ್ತಿಕ್ಕುವ ದೃಷ್ಟಿಯಿಂದ, ಸಂಬಂಧವಿಲ್ಲದವರು ಸಚಿವರ ವಿರುದ್ಧ ವ್ಯವಸ್ಥಿತವಾಗಿ ತಪ್ಪು ಅಭಿಪ್ರಾಯ ಮೂಡಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ಅವರನ್ನು ತಕ್ಷಣವೇ ಪಕ್ಷ ಮತ್ತು ಸಂಘಟನೆಯಿಂದ ಹೊರಹಾಕಬೇಕೆಂದು ಅವರು ಒತ್ತಾಯಿಸಿದರು.
