Belagavi

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ಇಲಿ ಪಾಷಾಣ ನೀಡಿ ಹತ್ಯೆ

Share

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಒಂದೇ ಕಾರಣಕ್ಕೆ, ಪತಿಯೊಬ್ಬ ಜೀರಾ ಸೋಡಾದಲ್ಲಿ ವಿಷವಿಕ್ಕಿ, ಕುತ್ತಿಗೆ ಹಿಸುಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶೀತಲಿಬಾವಿ ಬಳಿ ನಡೆದಿದೆ. ಅಪಘಾತದ ನಾಟಕ ವಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಖದೀಮ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಕೆ. ರಾಮರಾಜನ್, ಘಟಪ್ರಭಾ ಶಿಂಧಿಕುರಬೇಟ ನಿವಾಸಿ ಸಂತೋಷ ರೇವಪ್ಪ ಪಟಾಯಿತ (33) ಎಂಬಾತನೇ ತನ್ನ ಪತ್ನಿ ಸಾವಕ್ಕಾ (32)ಳನ್ನು ಕೊಂದ ಹಂತಕ. ಜೂನ್ 12 ರಂದು ಮರಕುಂಬಿ ದೇವಸ್ಥಾನಕ್ಕೆ ದಂಪತಿಗಳು ಹೋಗಿ ಮರಳುವಾಗ, ಮುರಗೋಡ ಬಳಿ ಪತಿ ಸಂತೋಷ್ ಜೀರಾ ಸೋಡಾ ಖರೀದಿಸಿದ್ದಾನೆ. ತನಗೆ ವಿವಾಹೋತ್ತರ ಅನೈತಿಕ ಸಂಬಂಧವಿದ್ದ ಕಾರಣ ಪತ್ನಿಯನ್ನು ಮುಗಿಸಲು ಸಂಚು ರೂಪಿಸಿದ್ದ ಈತ, ಸಾವಕ್ಕಾಳಿಗೆ ಗೊತ್ತಾಗದಂತೆ ಆಕೆಯ ಸೋಡಾ ಬಾಟಲಿಗೆ ಇಲಿ ಪಾಷಾಣ ಹಾಗೂ ಗಾಜಿನ ಪುಡಿಯನ್ನು ಬೆರೆಸಿ ಕುಡಿಸಿದ್ದಾನೆ. ವಿಷಯುಕ್ತ ಸೋಡಾ ಕುಡಿದ ಸಾವಕ್ಕಾ ಅವರ ಆರೋಗ್ಯ ಶೀತಲಿಬಾವಿ ತಲುಪುವಷ್ಟರಲ್ಲಿ ತೀವ್ರ ಏರುಪೇರಾದಾಗ, ಕ್ರೂರಿ ಪತಿ ಸಂತೋಷ್ ಬೈಕ್ ನಿಲ್ಲಿಸಿ ಆಕೆಯ ಕುತ್ತಿಗೆ ಹಿಸುಕಿ ಪ್ರಾಣ ತೆಗೆದಿದ್ದಾನೆ. ಬಳಿಕ ತಾನೇ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಗೆ ಫೋನ್ ಮಾಡಿ, ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎಂದು ಕಥೆ ಕಟ್ಟಿದ್ದಾನೆ. ಆದರೆ ಆಸ್ಪತ್ರೆಗೆ ತಂದಾಗ ಪತ್ನಿ ಮೃತಪಟ್ಟಿದ್ದು, ಪತಿಗೆ ಯಾವುದೇ ಸಣ್ಣ ಗಾಯವೂ ಆಗದಿರುವುದು ಪೊಲೀಸರ ತೀವ್ರ ಅನುಮಾನಕ್ಕೆ ಕಾರಣವಾಗಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ತನಿಖೆ ಮುಂದುವರೆದಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

Tags:

error: Content is protected !!