Belagavi

2 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಭೀಕರ ಕೊಲೆ: ಆಸ್ಪತ್ರೆಯಲ್ಲೇ ಸಲೈನ್ ಮೂಲಕ ವಿಷವಿಕ್ಕಿದ ಪತ್ನಿ ಮತ್ತು ಪ್ರಿಯಕರ ಸೇರಿ 9 ಮಂದಿ ಅರೆಸ್ಟ್; ಎಸ್ಪಿ ಕೆ ರಾಮರಾಜನ್

Share

ಬೆಳಗಾವಿ ಜಿಲ್ಲೆಯಲ್ಲಿ 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನನ್ನೇ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಆಸ್ಪತ್ರೆಯಲ್ಲೇ ಮಲಗಿದ್ದ ಜಾಗದಲ್ಲೇ ಕೊಲೆ ಮಾಡಿರುವ ಭೀಕರ ಘಟನೆ ಬಯಲಾಗಿದೆ. ಅಪಘಾತ ಎಂದು ಬಿಂಬಿಸಿ, ಪೊಲೀಸರು ಮತ್ತು ಎಫ್‌ಎಸ್‌ಎಲ್ ಸಿಬ್ಬಂದಿಗೂ ಲಂಚ ನೀಡಿ ವರದಿ ತಿದ್ದುಪಡಿ ಮಾಡಿದ್ದ ಖತರ್ನಾಕ್ ಜಾಲವನ್ನು ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಭೇದಿಸಿದ್ದಾರೆ. .

ವಿಮೆ ಹಣಕ್ಕಾಗಿ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನು ಆಸ್ಪತ್ರೆಯಲ್ಲೇ ವಿಷವಿಕ್ಕಿ ಕೊಂದಿರುವ ಭೀಕರ ಪ್ರಕರಣವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ. ನಿವೃತ್ತ ಯೋಧ ಸಂದೀಪ ಮಂಜರಗಿ (46) ಕೊಲೆಯಾದ ದುರ್ದೈವಿ. ಸಣ್ಣ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಂದೀಪ್‌ನನ್ನು, ಹೆಚ್ಚಿನ ಚಿಕಿತ್ಸೆಗಾಗಿ ಪತ್ನಿ ಸುಮಾ ಘಟಪ್ರಭಾದ ಜೆಜೆ ಕೋ ಆಸ್ಪತ್ರೆಗೆ ದಾಖಲಿಸಿದ್ದಳು. ಇದೇ ಸಂದರ್ಭವನ್ನು ಬಳಸಿಕೊಂಡ ಪತ್ನಿ ಸುಮಾ ಹಾಗೂ ಆಕೆಯ ಪ್ರಿಯಕರ ಪುಂಡಲೀಕ, ಆಸ್ಪತ್ರೆಯಲ್ಲೇ ನಿದ್ದೆ ಮಾತ್ರೆ ನೀಡಿ ಬಳಿಕ ಸಲೈನ್ ಬಾಟಲಿ ಮೂಲಕವೇ ವಿಷಪ್ರಾಶನ ಮಾಡಿ ಕೊಲೆಗೈದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯ ಯೋಧನ ಪತ್ನಿ ಸುಮಾ, ಪ್ರಿಯಕರ ಪುಂಡಲೀಕ ಸೇರಿದಂತೆ ಒಟ್ಟು 9 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕೊಲೆಯನ್ನು ಅಪಘಾತದ ಸಾವು ಎಂದು ಬಿಂಬಿಸಲು ಆರೋಪಿಗಳು ಹೂಡಿದ್ದ ಪ್ಲಾನ್ ಕೇಳಿದರೆ ಕಾನೂನು ರಕ್ಷಕರೆ ಬೆಚ್ಚಿಬೀಳುತ್ತಾರೆ. ಮರಣೋತ್ತರ ಪರೀಕ್ಷೆಯ ಎಫ್‌ಎಸ್‌ಎಲ್ (FSL) ವರದಿಯಲ್ಲಿ ವಿಷಪ್ರಾಶನವಾಗಿರುವುದು ಉಲ್ಲೇಖವಾಗಿತ್ತು. ಆದರೆ, ಆರೋಪಿಗಳು ಹಣದ ಆಮಿಷ ಒಡ್ಡಿ ಎಫ್‌ಎಸ್‌ಎಲ್ ವರದಿಯನ್ನೇ ತಿದ್ದುಪಡಿ ಮಾಡಿಸಿದ್ದರು. ಈ ಕೃತ್ಯಕ್ಕೆ ಸ್ವತಃ ಪೊಲೀಸ್ ಸಿಬ್ಬಂದಿಯೇ ಸಾಥ್ ನೀಡಿರುವುದು ಇಲಾಖೆಗೆ ಕಪ್ಪುಚುಕ್ಕೆಯಾಗಿದೆ. ಸದ್ಯ ಕೊಲೆ ಕೃತ್ಯ ಹಾಗೂ ವರದಿ ತಿದ್ದುಪಡಿಗೆ ಸಾಥ್ ಕೊಟ್ಟ ಅಪ್ಪಾಸಾಬ್ ನಾಯಿಕವಾಡಿ, ಚನ್ನಪ್ಪಾ ಅಡವಿಸ್ವಾಮಿಮಠ, ನಾಗರಾಜು, ಅಶೋಕ ಗುಜನಾಳ, ಬಸವರಾಜ್ ಬಸ್ಮೆ ಹಾಗೂ ರಾಹುಲ್ ಜೋಗಿಯನ್ನು ಬಂಧಿಸಲಾಗಿದೆ. ಕೊನೆಗೆ ವಿಮೆ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಸುಮಾ ಮತ್ತು ಪುಂಡಲೀಕ ನಡುವೆ ನಡೆದ ಜಗಳ ಇಡೀ ರಹಸ್ಯವನ್ನು ಹೊರಹಾಕಿದ್ದು, ಪ್ರಕರಣವನ್ನು ಚುರುಕಾಗಿ ಭೇದಿಸಿದ ಯಮಕನಮರಡಿ ಹಾಗೂ ಘಟಪ್ರಭಾ ಪೊಲೀಸರ ಕಾರ್ಯಕ್ಕೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!