ಬಾಗಲಕೋಟೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆ ರಸಗೊಬ್ಬರಕ್ಕಾಗಿ ರೈತರು ಪರದಾಡುವಂತಾಗಿದೆ. ಕೃಷಿ ಇಲಾಖೆಯ ಲೆಕ್ಕಾಚಾರದ ಪ್ರಕಾರ ಜಿಲ್ಲೆಯಲ್ಲಿ ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದ ಯೂರಿಯಾ ಮತ್ತು ಡಿಎಪಿ ಗೊಬ್ಬರ ದಾಸ್ತಾನು ಇದ್ದರೂ, ಖಾಸಗಿ ಅಂಗಡಿಗಳಲ್ಲಿ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಗೊಬ್ಬರ ನೀಡದೆ ಸತಾಯಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ವರದಿ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಒಟ್ಟು 3 ಲಕ್ಷದ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಮುಂಗಾರು ವಿಳಂಬವಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಕೇವಲ 3 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಕೃಷಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಮುಂಗಾರು ಬಿತ್ತನೆಗೆ ಜಿಲ್ಲೆಯಲ್ಲಿ ಒಟ್ಟು 55,711 ಟನ್ ರಸಗೊಬ್ಬರದ ಬೇಡಿಕೆಯಿದ್ದು, ಈಗಾಗಲೇ 73,533 ಟನ್ ಸರಬರಾಜಾಗಿದೆ ಹಾಗೂ ಸದ್ಯ 40,976 ಟನ್ ದಾಸ್ತಾನು ಲಭ್ಯವಿದೆ. ಇದರಲ್ಲಿ ವಿಶೇಷವಾಗಿ 8,362 ಟನ್ ಡಿಎಪಿ ಬೇಡಿಕೆಗೆ ಎದುರಾಗಿ 4,102 ಟನ್ ಹಾಗೂ 21,651 ಟನ್ ಯೂರಿಯಾ ಬೇಡಿಕೆಗೆ ಎದುರಾಗಿ 13,998 ಟನ್ ಗೊಬ್ಬರ ಸದ್ಯ ಸ್ಟಾಕ್ ಇದೆ. ಕೊಲ್ಲಿ ರಾಷ್ಟ್ರಗಳ ಯುದ್ಧದ ಪರಿಣಾಮ ಡಿಎಪಿ ಸರಬರಾಜಿನಲ್ಲಿ ಕೊಂಚ ಸಮಸ್ಯೆಯಾಗಿದ್ದರೂ ಜಿಲ್ಲೆಯಲ್ಲಿ ಕೊರತೆಯಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಗೋದಾಮುಗಳಲ್ಲಿ ಗೊಬ್ಬರ ಇದ್ದರೂ ಖಾಸಗಿ ಮಾರಾಟಗಾರರು ಮಾತ್ರ ‘ನೋ ಸ್ಟಾಕ್’ ಎನ್ನುತ್ತಿದ್ದಾರೆ, ಅಲ್ಲದೆ ಗೊಬ್ಬರ ಬೇಕಿದ್ದರೆ ಬೇರೆ ಅನಗತ್ಯ ಉತ್ಪನ್ನಗಳನ್ನು ಖರೀದಿಸಲೇಬೇಕೆಂದು ‘ಲಿಂಕ್ ಕಡ್ಡಾಯ’ಗೊಳಿಸಿ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಇನ್ನಾದರೂ ಕೃಷಿ ಇಲಾಖೆ ಅಧಿಕಾರಿಗಳು ಇಂತಹ ಅಂಗಡಿಗಳ ಮೇಲೆ ದಾಳಿ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕಿದೆ.

