Chikkodi

ತಂಬಾಕು ಮುಕ್ತ ಜಾಗೃತಿ ರ‍್ಯಾಲಿ

Share

ತಂಬಾಕು ಸೇವನೆಯು ಕ್ಯಾನ್ಸರ್, ಹೃದಯರೋಗ, ಶ್ವಾಸಕೋಶದ ಕಾಯಿಲೆಗಳು ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆರೋಗ್ಯಕರ ಮತ್ತು ಸಂತೋಷದ ಜೀವನಕ್ಕಾಗಿ ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ವಿಜಯಕುಮಾರ ಅವರು ಹೇಳಿದರು.

ಅವರು ಚಿಕ್ಕೋಡಿಯಲ್ಲಿ ಕೆ.ಎಲ್.ಇ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆ.ಎಲ್.ಇ. ನರ್ಸಿಂಗ್ ಮಹಾವಿದ್ಯಾಲಯ, ಉಪವಿಭಾಗಾಧಿಕಾರಿಗಳ ಕಚೇರಿ, ಕಂದಾಯ ಇಲಾಖೆ, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕು ಕಾನೂನು ಸೇವೆಗಳ ಸಮಿತಿ, ಶಿಕ್ಷಣ ಇಲಾಖೆ, ಪುರಸಭೆ, ಕೆ.ಎಸ್.ಆರ್.ಟಿ.ಸಿ. ಚಿಕ್ಕೋಡಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ/ಸರ್ವೇಕ್ಷಣ ಘಟಕ, ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ತಂಬಾಕು ವ್ಯಸನಮುಕ್ತ ಕೇಂದ್ರದ ಉದ್ಘಾಟನೆ ಹಾಗೂ ತಂಬಾಕು ಮುಕ್ತ ಜಾಗೃತಿ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ತಮ್ಮ ಕುಟುಂಬ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಆರ್. ಎಸ್. ಖಣದಾಳೆ ಅವರು ಮಾತನಾಡಿ, ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯಂತ ಅಗತ್ಯವೆಂದರು.

ಕೆ.ಎಲ್.ಇ. ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಕಿರಣಕುಮಾರ ಮುತ್ನಾಳಿ ಅವರು ಮಾತನಾಡಿ, ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಘೋಷವಾಕ್ಯ “ನಿಕೋಟಿನ್ ಮತ್ತು ತಂಬಾಕು ವ್ಯಸನವನ್ನು ಬಯಲುಪಡಿಸುವುದು” ಎಂಬುದಾಗಿದೆ ಎಂದು ತಿಳಿಸಿದರು. ಭಾರತವು ತಂಬಾಕು ಬಳಕೆಯಲ್ಲಿ ವಿಶ್ವದಲ್ಲೇ ಎರಡನೇ ಅತಿದೊಡ್ಡ ದೇಶವಾಗಿದ್ದು, ಸುಮಾರು 267 ಮಿಲಿಯನ್ ಜನರು ತಂಬಾಕು ಬಳಸುತ್ತಿದ್ದಾರೆ. ದೇಶದ ವಯಸ್ಕರಲ್ಲಿ 28% ಜನರು ತಂಬಾಕು ಸೇವಿಸುತ್ತಿದ್ದು, ಇವರಲ್ಲಿ 42% ಪುರುಷರು ಹಾಗೂ 14% ಮಹಿಳೆಯರು ಸೇರಿದ್ದಾರೆ. ಸುಮಾರು 21% ಜನರು ಗುಟ್ಕಾ, ಜರ್ದಾ, ಖೈನಿ ಮುಂತಾದ ಹೊಗೆಯಿಲ್ಲದ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದರೆ, 10% ಜನರು ಧೂಮಪಾನ ಮಾಡುತ್ತಿದ್ದಾರೆ ಎಂದು ಹೇಳಿದರು.ತಂಬಾಕು ಸೇವನೆಯ ಪರಿಣಾಮವಾಗಿ ಭಾರತದಲ್ಲಿ ಪ್ರತಿವರ್ಷ ಸುಮಾರು 13 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ ಸುಮಾರು 90% ಪ್ರಕರಣಗಳು ತಂಬಾಕು ಬಳಕೆಗೆ ಸಂಬಂಧಿಸಿದ್ದು, ತಂಬಾಕು ಸಂಬಂಧಿತ ರೋಗಗಳಿಂದ ದೇಶದ ಆರ್ಥಿಕತೆಗೆ ವರ್ಷಕ್ಕೆ ಸುಮಾರು ₹1.7 ಲಕ್ಷ ಕೋಟಿ ನಷ್ಟ ಉಂಟಾಗುತ್ತಿದೆ ಎಂದು ಅವರು ವಿವರಿಸಿದರು.

ವಿದ್ಯಾರ್ಥಿಗಳು ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಘೋಷಣೆಗಳನ್ನು ಕೂಗುತ್ತಾ ಚಿಕ್ಕೋಡಿ ನಗರದ ಅಂಕಲಿ ಖೂಟದಿಂದ ಪ್ರಾರಂಭಿಸಿ ಕೆ.ಸಿ. ರಸ್ತೆಯ ಮೂಲಕ ಕೇಂದ್ರ ಬಸ್ ನಿಲ್ದಾಣದವರೆಗೆ ಜಾಗೃತಿ ರ‍್ಯಾಲಿ ನಡೆಸಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿಯ ಸಹಾಯಕ ಆಯುಕ್ತರಾದ ಶ್ರೀ ಸುಭಾಷ್ ಸಂಪಗಾವಿ, ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರು ಹಾಗೂ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಶ್ರೀ ಅರುಣಕುಮಾರ, ಶ್ರೀ ಆರ್.ಬಿ. ಹಿತ್ತಲಮನಿ, ಶ್ರೀ ಆರ್.ಎಂ. ಮಿರ್ಜೆ, ಶ್ರೀಮತಿ ಅನ್ನಪೂರ್ಣಾ ಚೌಗಲಾ, ಶ್ರೀಮತಿ ಮೀನಾಕ್ಷಿ ಪಾಟೀಲ, ಶ್ರೀ ಬಸವರಾಜ ಬಿ. ಹಾಗೂ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ಮುಖ್ಯಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಾ. ನೀತಿನ್ ಪಾಟೀಲ, ಡಾ. ಸಂತೋಷ ಶಿವಣ್ಣನವರ್, ಡಾ. ರವಿ ಮಡಿವಾಳರ, ಡಾ. ಶ್ರೀಧರ ಲಕ್ಕುಂಡಿ, ಡಾ. ಸುಜಾತಾ ಹಾಗೂ ಕೆ.ಎಲ್.ಇ. ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಸುನೀಲ್ ಎಂ.ಬಿ. ಉಪಸ್ಥಿತರಿದ್ದರು.

ಡಾ. ಕೋಮಲ್ ಜಾಧವ ಅವರು ಸ್ವಾಗತಿಸಿದರು. ಡಾ. ಸುಧೀಂದ್ರ ಹೊನವಾಡ ಅವರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಹಾಂತೇಶ ಗುಡ್ನವರ ಅವರು ವಂದಿಸಿದರು.

ರ‍್ಯಾಲಿಯಲ್ಲಿ ಕೆ.ಎಲ್.ಇ. ಆಯುರ್ವೇದ ಹಾಗೂ ನರ್ಸಿಂಗ್ ಕಾಲೇಜಿನ ಉಪನ್ಯಾಸಕರು, ವೈದ್ಯರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉತ್ಸಾಹದಿಂದ ಭಾಗವಹಿಸಿದರು.

ಸಮಾರೋಪ ಸಮಾರಂಭದಲ್ಲಿ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಬಸಗೌಡಾ ನೇರ್ಲಿ ಅವರು ಯುವಜನರಲ್ಲಿ ತಂಬಾಕಿನ ದುಷ್ಪರಿಣಾಮಗಳು ಹಾಗೂ ಅದರಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳು ಮತ್ತು ಅಪರಾಧಗಳ ಕುರಿತು ಜಾಗೃತಿ ಮೂಡಿಸಿದರು.

ಜಿಲ್ಲಾ ತಂಬಾಕು ವ್ಯಸನಮುಕ್ತ ಕೇಂದ್ರದ ಮುಖ್ಯಸ್ಥರಾದ ಡಾ. ಶ್ವೇತಾ ಪಾಟೀಲ್ ಅವರು ತಂಬಾಕು ವ್ಯಸನಮುಕ್ತ ಕೇಂದ್ರದ ಕಾರ್ಯಚಟುವಟಿಕೆಗಳು ಹಾಗೂ ಸೇವೆಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಮನೋವೈದ್ಯಕೀಯ ಕೇಂದ್ರದ ವೈದ್ಯರಾದ ಡಾ. ಉತ್ತಮ ಶೇಳಾರ ಅವರು ಸಹ ಕಾರ್ಯಕ್ರಮದಲ್ಲಿ ಮಾತನಾಡಿದರು.

Tags:

error: Content is protected !!