ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಪಟ್ಟಣಕುಡಿ ವ್ಯಾಪ್ತಿಯ ದಾಯಿಂಗಡೆ ಮಳಾದಲ್ಲಿ ನಿರ್ಮಿಸಲಾದ ‘ಜಿ ಪ್ಲಸ್-2’ ಮನೆಗಳನ್ನು ಯಾವುದೇ ಗೊಂದಲವಿಲ್ಲದೆ, ಕೇವಲ ಅರ್ಹ ಮತ್ತು ಬಡ ಫಲಾನುಭವಿಗಳಿಗೆ ಮಾತ್ರ ವಿತರಿಸಬೇಕು ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಹಾಗೂ ಬುಡಾ ಅಧ್ಯಕ್ಷ ಲಕ್ಷ್ಮಣ್ ಚಿಂಗಳೆ ಆಗ್ರಹಿಸಿದ್ದಾರೆ.

ನಿಪ್ಪಾಣಿ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಮೇ 20 ರಂದು ಜನಪ್ರತಿನಿಧಿಗಳು ಹಳೆಯ ದೋಷಪೂರಿತ ಪಟ್ಟಿಯನ್ನೇ ಇಟ್ಟುಕೊಂಡು ಡ್ರಾ ನಡೆಸಲು ಮುಂದಾಗಿದ್ದರು. ಆದರೆ, ಸಾಮಾನ್ಯ ಜನರ ಹಿತದೃಷ್ಟಿಯಿಂದ ನಾವು ಅದನ್ನು ತಡೆದಿದ್ದೆವು. ಪ್ರಸ್ತುತ ಆಶ್ರಯ ಸಮಿತಿ ಅಸ್ತಿತ್ವದಲ್ಲಿ ಇಲ್ಲದ ಕಾರಣ, ಜಿಲ್ಲಾಧಿಕಾರಿಗಳೇ ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಮ್ಮ ಒತ್ತಾಯದ ಮೇರೆಗೆ ಆಡಳಿತ ಮಂಡಳಿಯು 1012 ಫಲಾನುಭವಿಗಳ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದೆ. ಸದ್ಯ ಪ್ರತಿ ಫಲಾನುಭವಿಯ ವೈಯಕ್ತಿಕ ಸಮೀಕ್ಷೆ ನಡೆಯುತ್ತಿದ್ದು, ಜೂನ್ 12 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.ಈ ಮನೆ ಹಂಚಿಕೆ ಗೊಂದಲದ ಕುರಿತು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ಗಮನಕ್ಕೆ ತಂದು ನಿರಂತರವಾಗಿ ಬೆನ್ನತ್ತಲಾಗಿತ್ತು. ಇದರ ಫಲವಾಗಿ ಎಸಿ ಸುಭಾಷ್ ಸಂಪಗಾವಿ ಅವರು ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಿ, ಪಾರದರ್ಶಕ ತನಿಖೆಗೆ ಆದೇಶಿಸಿದ್ದಾರೆ. ಹಣ ಪಾವತಿಸಿರುವ ಮೂಲ ಹಾಗೂ ಬಡ ಫಲಾನುಭವಿಗಳಿಗೆ ನ್ಯಾಯ ಸಿಗಬೇಕು. ಒಂದು ವೇಳೆ ಶ್ರೀಮಂತರು ಅಥವಾ ಅನರ್ಹರು ಈ ಪಟ್ಟಿಯಲ್ಲಿದ್ದರೆ ಅವರ ವಿರುದ್ಧ ಧ್ವನಿ ಎತ್ತಿ ದೂರು ನೀಡಬೇಕು. ತಳಮಟ್ಟದ ಸಮೀಕ್ಷೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಜಾಗರೂಕರಾಗಿ ಕೆಲಸ ಮಾಡಬೇಕು ಎಂದು ಚಿಂಗಳೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ರಾಜೇಶ್ ಕದಂ, ನಗರ ಯೋಜನಾ ಸಮಿತಿ ಅಧ್ಯಕ್ಷ ಸಂಯೋಜಿತ್ ಪಾಟೀಲ, ಯುವ ಮುಖಂಡ ಸುಜಯ ಪಾಟೀಲ್, ಮಾಜಿ ಪುರಸಭೆ ಅಧ್ಯಕ್ಷ ಚಂದ್ರಕಾಂತ ಜಾಸೂದ ಸೇರಿದಂತೆ ಹಲವು ಪ್ರಮುಖ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
