ನಂದಿನಿ ಉತ್ಪನ್ನಗಳ ಗುಣಮಟ್ಟದ ಮಾರಾಟದಲ್ಲಿ ಭಾರತದಲ್ಲೇ 4ನೇ ಸ್ಥಾನ ಹಾಗೂ ಹಾಲು ಉತ್ಪಾದನೆಯಲ್ಲಿ ಕೆ.ಎಂ.ಎಫ್. ಒಕ್ಕೂಟವು 2ನೇ ಸ್ಥಾನ ಪಡೆಯಲು ಹಾಲಿನ ಗುಣಮಟ್ಟವೇ ಮುಖ್ಯ ಕಾರಣ ಎಂದು ಕೆ.ಎಂ.ಎಫ್. ನಿರ್ದೇಶಕ ಹಾಗೂ ನ್ಯಾಯವಾದಿ ವಿರೂಪಾಕ್ಷಿ ಈಟಿ ಪ್ರತಿಪಾದಿಸಿದರು.


ಚಿಕ್ಕೋಡಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಕೆ.ಎಂ.ಎಫ್.) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚಿಕ್ಕೋಡಿ ತಾಲೂಕಿನ ಹಾಲು ಉತ್ಪಾದಕ ಸಂಘಗಳ ಪದಾಧಿಕಾರಿಗಳ ಪ್ರಾದೇಶಿಕ ಸಭೆಯನ್ನು ದೀಪ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಒಕ್ಕೂಟವು ಗುಣಮಟ್ಟದ ಹಾಲನ್ನು ಸಂಗ್ರಹಿಸಬೇಕು ಮತ್ತು ಹಾಲಿನ ಕಲಬೆರಕೆಯನ್ನು ತಡೆಯಬೇಕು ಎಂದು ಕರೆ ನೀಡಿದ ಅವರು, ಚಿಕ್ಕೋಡಿ ನಗರದಲ್ಲಿ ಹೊಸದಾಗಿ ಆರು ನಂದಿನಿ ಪಾರ್ಲರ್ಗಳನ್ನು ಹಾಗೂ ತಾಲೂಕಿನಲ್ಲಿ ಹೊಸ ಸಂಘಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.


ಬೆಳಗಾವಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಕಾಂತ್ ಮಾತನಾಡಿ 40 ವರ್ಷಗಳ ಇತಿಹಾಸವಿರುವ ಸಂಸ್ಥೆಯು ಗುಣಮಟ್ಟದಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳದ ಕಾರಣ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಗ್ರಾಹಕರಿಗೆ ಉತ್ತಮ ಹಾಲು ನೀಡುವುದು ಮತ್ತು ರೈತರಿಗೆ ನ್ಯಾಯಯುತ ದರ ಒದಗಿಸುವುದು ನಮ್ಮ ಗುರಿ. ಪ್ರಸ್ತುತ ದಿನಕ್ಕೆ 2.5 ಲಕ್ಷ ಲೀಟರ್ ಇರುವ ಹಾಲು ಸಂಗ್ರಹಣೆಯನ್ನು 5 ಲಕ್ಷ ಲೀಟರ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದ್ದು, ರೈತರು ಹೆಚ್ಚಿನ ಹಾಲು ಪೂರೈಸಬೇಕು” ಎಂದು ಕೋರಿದರು.
ಸಭೆಯ ಆರಂಭದಲ್ಲಿ ಕೆ.ಎಂ.ಎಫ್.ನ ಪಿ ಆಂಡ್ ಐ ವಿಭಾಗದ ಮುಖ್ಯಸ್ಥ ಡಾ. ರಾಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ವ್ಯವಸ್ಥಾಪಕ ಡಾ. ಆರ್. ಬಿ. ಜಂಬಗಿ ಸ್ವಾಗತಿಸಿದರೆ, ವಿಸ್ತರಣಾಧಿಕಾರಿಗಳು ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಚಿಕ್ಕೋಡಿ ತಾಲೂಕಿನ ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
