ಮಹಿಳೆಯರಲ್ಲಿ ಮಾರಕವಾಗಿ ಪರಿಣಮಿಸುತ್ತಿರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್‌ಇ) ಸಂಸ್ಥೆಯು ಮಹತ್ವದ ಹೆಜ್ಜೆ ಇಟ್ಟಿದೆ. ಕೆಎಲ್‌ಇ ಎಚ್‌ಪಿವಿ ವ್ಯಾಕ್ಸಿನೇಷನ್ ಇನಿಶಿಯೇಟಿವ್‌ನ ಮೊದಲ ಹಂತವನ್ನು ಸಂಸ್ಥೆಯು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ನೂರಾರು ಹದಿಹರೆಯದ ಹೆಣ್ಣುಮಕ್ಕಳು ಹಾಗೂ ಮಹಿಳೆಯರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.

ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್‌ನ ಕುಲಪತಿ ಡಾ. ಪ್ರಭಾಕರ ಬಿ.ಕೋರೆ ಅವರ ಮಾರ್ಗದರ್ಶನ ಹಾಗೂ ಡಾ. ಪ್ರೀತಿ ಕೆ.ದೊಡ್ಡವಾಡ ಅವರ ನೇತೃತ್ವದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ದೂರದೃಷ್ಟಿಯೊಂದಿಗೆ ಈ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ನಗರ, ಹುಬ್ಬಳ್ಳಿ, ಧಾರವಾಡ, ನಿಪ್ಪಾಣಿ, ಚಿಕ್ಕೋಡಿ ಹಾಗೂ ಅಂಕಲಿಯ ಒಟ್ಟು 9 ಕೆಎಲ್‌ಇ ಶಾಲೆಗಳಲ್ಲಿ ಯಶಸ್ವಿಯಾಗಿ ಜಾಗೃತಿ ಮತ್ತು ಸಂವೇದನೆ ಕಾರ್ಯಕ್ರಮಗಳನ್ನು ನಡೆಸಲಾಯಿತು. ಬೆಳಗಾವಿಯ ಜೆ.ಎನ್. ವೈದ್ಯಕೀಯ ಕಾಲೇಜಿನ ಸ್ತ್ರೀರೋಗತಜ್ಞ ಕ್ಯಾನ್ಸರ್ ಶಸ್ತ್ರಚಿಕಿತ್ಸಕಿ ಡಾ. ಸ್ವಾತಿ ಎಸ್. ಗೌಡರ್ ಅವರ ನೇತೃತ್ವದಲ್ಲಿ, ಮಕ್ಕಳ ತಜ್ಞರಾದ ಡಾ. ಜ್ಞಾನೇಶ್ ಕಾಂಬ್ಳೆ ಮತ್ತು ಡಾ. ಶ್ರೀಹರ್ಷ ಬಡಿಗೇರ್ ಅವರ ಕ್ಲಿನಿಕಲ್ ಬೆಂಬಲದೊಂದಿಗೆ ಈ ಬೃಹತ್ ಉಪಕ್ರಮವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಯಿತು. ಈ ಜಾಗೃತಿ ಅಭಿಯಾನಕ್ಕೆ ಬೆಂಗಳೂರಿನ ಗುಲಾಬ್ ಸೇವಾ ಫೌಂಡೇಶನ್ ಮತ್ತು ಶ್ರೀಮತಿ ದೀಪ್ತಿ ಕೋರೆ ಅವರು ವಿಶೇಷ ಬೆಂಬಲ ನೀಡಿದ್ದರು.

ಸೆಪ್ಟೆಂಬರ್ 2025 ರಿಂದ ಮೇ 2026 ರವರೆಗೆ ನಡೆದ ಈ ಲಸಿಕಾ ಅಭಿಯಾನದಲ್ಲಿ ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ‘ಗಾರ್ಡಸಿಲ್’ ಕ್ವಾಡ್ರಿವೇಲೆಂಟ್ ಎಚ್‌ಪಿವಿ ಲಸಿಕೆಯನ್ನು ಬಳಸಲಾಗಿದ್ದು, ಒಟ್ಟು 589 ಫಲಾನುಭವಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಇದರಲ್ಲಿ 488 ಹುಡುಗಿಯರು, 29 ಹುಡುಗರು ಹಾಗೂ 72 ವಯಸ್ಕ ಮಹಿಳೆಯರು ವಯಸ್ಸಿಗೆ ಸೂಕ್ತವಾದ ಡೋಸಿಂಗ್ ವೇಳಾಪಟ್ಟಿಯಂತೆ ಲಸಿಕೆ ಪಡೆದಿದ್ದು, ಮುಖ್ಯವಾಗಿ 9 ರಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ವಿಶೇಷ ಒತ್ತು ನೀಡಲಾಗಿತ್ತು. ಬೆಳಗಾವಿ ಮತ್ತು ಹುಬ್ಬಳ್ಳಿಯ ಕೆಎಲ್‌ಇ ಆಸ್ಪತ್ರೆಗಳ ಆವರಣದಲ್ಲೇ ಸಂಪೂರ್ಣ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಈ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಕರ್ನಲ್ ಡಾ. ಎಂ. ದಯಾನಂದ್ ಹಾಗೂ ಡಾ. ರಾಜಶೇಖರ ಸೋಮನಟ್ಟಿ ಸೇರಿದಂತೆ ಹಿರಿಯ ವೈದ್ಯಕೀಯ ಅಧಿಕಾರಿಗಳು ಆಡಳಿತಾತ್ಮಕ ಬೆಂಬಲ ನೀಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಮುಕ್ತ ಸಮಾಜದ ದೃಷ್ಟಿಕೋನಕ್ಕೆ ಪೂರಕವಾಗಿ ಕೆಎಲ್‌ಇ ಸಂಸ್ಥೆ ಹಮ್ಮಿಕೊಂಡ ಈ ತಡೆಗಟ್ಟುವ ಆರೋಗ್ಯ ಕಾರ್ಯಕ್ರಮ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆಗೆ ಪಾತ್ರವಾಗಿದೆ.
