ಸಿರಿವರ ಪ್ರಕಾಶನದ ವತಿಯಿಂದ ಕೃತಿ ರಚನೆಕಾರರಾದ ಶ್ರೀ ಶಂಕರ ಬುಚಡಿ ಅವರು ಬರೆದಿರುವ ‘ಭಾರತದಲ್ಲಿ ಶಂಕರಿ ಸನ್ನಿಧಿ’ ಎಂಬ ವಿಶೇಷ ಧಾರ್ಮಿಕ ಗ್ರಂಥದ ಬಿಡುಗಡೆ ಸಮಾರಂಭವು ಇಂದು ಬೆಳಗಾವಿಯಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.


ಬೆಳಗಾವಿಯ ಖಾಸಬಾಗದ ಉಪ್ಪಾರ ಗಲ್ಲಿಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಇಂದು ರವಿವಾರ ಈ ಪುಸ್ತಕ ಬಿಡುಗಡೆ ಸಮಾರಂಭವು ಸಂಪನ್ನಗೊಂಡಿತು. ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ನಿವೃತ್ತ ತೆರಿಗೆ ಇಲಾಖೆ ಅಧಿಕಾರಿಗಳಾದ ಜಿ. ಆರ್. ಮಂಜೇಶ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳಗಾವಿಯ ರಂಗಸೃಷ್ಟಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಲೋಕೋಪಯೋಗಿ ಇಲಾಖೆ ಅಭಿಯಂತರ ರಮೇಶ್ ಜಂಗಲ್ ಪಾಲ್ಗೊಂಡಿದ್ದರು.


ಬೆಂಗಳೂರಿನ ಸಿರಿವರ ಪ್ರಕಾಶನದ ರವೀಂದ್ರನಾಥ ಸಿರಿವರ ಅವರು ಕೃತಿಯನ್ನು ಪ್ರಕಟಿಸಿದ್ದು, ನಿವೃತ್ತ ಆರೋಗ್ಯ ಇಲಾಖೆ ಅಧಿಕಾರಿಗಳಾದ ಧಾರವಾಡದ ರಾಮಚಂದ್ರ ಗೆದ್ದಣ್ಣವರ ಅವರು ಗ್ರಂಥದಾನ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಜಂಟಿ ನಿರ್ದೇಶಕರಾದ ಎ. ನಾರಾಯಣಸ್ವಾಮಿ ವಹಿಸಿದ್ದರೆ, ಸಹಕಾರಿ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಎಚ್. ವಾಯ್. ಗದ್ದನಕೇರಿ ಅವರು ಕೃತಿಯ ಕುರಿತು ಆಳವಾದ ವಿಶ್ಲೇಷಣೆ ನಡೆಸಿಕೊಟ್ಟರು.

ಇದೇ ವೇಳೆ ವಿಶೇಷ ಆಹ್ವಾನಿತರಾಗಿ ಮಹಾನಗರಾಡಳಿತದ ಸದಸ್ಯರಾದ ರಮೇಶ್ ಸೊಂಟಕ್ಕಿ, ದೇವಾಂಗ ಸಮಾಜದ ಅಧ್ಯಕ್ಷ ಜ್ಞಾನಬಾ ವಾಗೂಕರ್, ನಿವೃತ್ತ ಅಭಿಯಂತರರಾದ ರಾಮರಾವ್ ಕಾರಗಿ ಹಾಗೂ ಬಸವೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಸತೀಶ ಪಾಟೀಲ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಚಂದವನ್ನು ಹೆಚ್ಚಿಸಿದರು. ಕೊನೆಯಲ್ಲಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಈ ಅಮೂಲ್ಯ ಗ್ರಂಥದ ಕರ್ತೃಗಳಾದ ಶ್ರೀ ಶಂಕರ ಬುಚಡಿ ಅವರು ಆಗಮಿಸಿದ ಎಲ್ಲ ಗಣ್ಯರಿಗೆ ಮತ್ತು ಭಕ್ತಾದಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
