ಗಣೇಶೋತ್ಸವಕ್ಕೆ ಇನ್ನು ಒಂದೂವರೆ ತಿಂಗಳು ಬಾಕಿ ಇರುವಾಗಲೇ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ‘ಆಕ್ಷನ್ ಮೋಡ್’ಗೆ ಇಳಿದಿದ್ದಾರೆ. ವಿಸರ್ಜನಾ ಮೆರವಣಿಗೆಯ ವಿಳಂಬಕ್ಕೆ ಮುಕ್ತಿ ಹಾಡಲು ಸ್ವತಃ ಅವರೇ ರಾತ್ರಿ ವೇಳೆ ಮೂರ್ತಿಕಾರರ ಕಾರ್ಯಾಶಾಲೆಗೆ ಭೇಟಿ ನೀಡಿ ಗಣೇಶ ಮೂರ್ತಿಕಾರರೊಂದಿಗೆ ಚರ್ಚಿಸಿದ್ದಾರೆ. ಕಳೆದ ವರ್ಷದ ತಾಂತ್ರಿಕ ತೊಡಕುಗಳನ್ನು ಈ ಬಾರಿ ಮರುಕಳಿಸದಂತೆ ಮಾಡಲು ಇಂದಿನಿಂದಲೇ ಪೊಲೀಸ್ ಕಮಿಷನರ್ ಗ್ರೌಂಡ್ ರಿಯಾಲಿಟಿ ಪರಿಶೀಲನೆ ಆರಂಭಿಸಿದ್ದಾರೆ.


ಬೆಳಗಾವಿಯ ಸುಪ್ರಸಿದ್ಧ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಎದುರಾಗುವ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ, ಸುಗಮ ಸಂಚಾರಕ್ಕೆ ಹಾದಿ ಮಾಡಿಕೊಡಲು ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬ್ರಾವ್ ಬೋರಸೆ ಭರ್ಜರಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಹಬ್ಬಕ್ಕೆ ೪೫ ದಿನಗಳು ಬಾಕಿ ಇರುವಂತೆಯೇ ಮಂಗಳವಾರ ರಾತ್ರಿ ೭ ರಿಂದ ೧೦ ಗಂಟೆಯವರೆಗೆ ನಗರದ ವಿವಿಧ ಭಾಗಗಳ ಗಣೇಶ ಮೂರ್ತಿ ಕಾರ್ಯಶಾಲೆಗಳಿಗೆ ಆಯುಕ್ತರು ನೇರ ಭೇಟಿ ನೀಡಿದರು. ಯಡಿಯೂರಪ್ಪ ರೋಡ್, ಅನಗೋಳ, ಮುತಗಾ ಗ್ರಾಮ ಹಾಗೂ ಗೂಡ್ಸ್ಶೆಡ್ ರಸ್ತೆಯ ಪ್ರಮುಖ ಮೂರ್ತಿಕಾರರ ಬಳಿ ತೆರಳಿ ಸುಮಾರು ೨೦೦ಕ್ಕೂ ಹೆಚ್ಚು ಮೂರ್ತಿಗಳ ಎತ್ತರ ಮತ್ತು ವಿನ್ಯಾಸವನ್ನು ವೀಕ್ಷಿಸಿದರು. ಮಧ್ಯವರ್ತಿ ಗಣೇಶೋತ್ಸವ ಮಹಾಮಂಡಲದ ಪ್ರಮುಖರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಕಮಿಷನರ್ ಅವರಿಗೆ ಸಾಥ್ ನೀಡಿದರು.

ಕಳೆದ ಬಾರಿ ಗಣೇಶ ವಿಸರ್ಜನೆ ವೇಳೆಯಲ್ಲಿ ಉಂಟಾದ ಅಡಚಣೆಗಳನ್ನು ತಾವೇ ಖುದ್ದಾಗಿ ಕಪಿಲೇಶ್ವರ ಕೆರೆಯ ಬಳಿ ನಿಂತು ವೀಕ್ಷಿಸಿದ್ದ ಆಯುಕ್ತ ಬೋರ್ಸೆ, ಈ ಬಾರಿ ಅಂತಹ ತಪ್ಪುಗಳು ಮರುಕಳಿಸದಂತೆ ಮೂರ್ತಿಕಾರರಿಗೆ ಮಹತ್ವದ ಸಲಹೆಗಳನ್ನು ನೀಡಿದರು. ಮೆರವಣಿಗೆ ಸುಲಭವಾಗಿ ಸಾಗಲು ಮತ್ತು ನಿಗದಿತ ಸಮಯದಲ್ಲಿ ವಿಸರ್ಜನೆ ಪೂರ್ಣಗೊಳ್ಳಲು ಬೇಕಾದ ತಾಂತ್ರಿಕ ಮಾರ್ಗದರ್ಶನ ನೀಡಿದ ಅವರು, ಮೂರ್ತಿಕಾರರಿಗೆ ಯಾವುದೇ ತೊಂದರೆಯಿದ್ದರೂ ನೇರವಾಗಿ ತಮ್ಮನ್ನು ಸಂಪರ್ಕಿಸುವಂತೆ ಅಭಯ ನೀಡಿದ್ದಾರೆ. ಶಾಹಪುರ, ಖಡೇಬಜಾರ್, ಎಂಟಿಎಡಿ ಸೇರಿದಂತೆ ವಿವಿಧ ಠಾಣಾಧಿಕಾರಿಗಳು ಹಾಜರಿದ್ದ ಈ ಸಭೆಯಲ್ಲಿ, ಮೂರ್ತಿಕಾರರು ಹಾಗೂ ಸಂಘಟಕರು ಪೊಲೀಸ್ ಇಲಾಖೆಯ ಈ ಸಕಾರಾತ್ಮಕ ಹೆಜ್ಜೆಗೆ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ.

