BELAGAVI

ಬೆಳಗಾವಿಯಲ್ಲಿ ಜೈನ ಮುನಿಗಳ ಭವ್ಯ ನಗರ ಪ್ರವೇಶ: ಜೈಕಾರಗಳೊಂದಿಗೆ ಅದ್ಧೂರಿ ಸ್ವಾಗತ

Share

ಗಡಿನಾಡು ಬೆಳಗಾವಿಯಲ್ಲಿ ಇಂದು ಆಧ್ಯಾತ್ಮಿಕ ವೈಭವದ ವಾತಾವರಣ ಸೃಷ್ಟಿಯಾಗಿತ್ತು. ಪರಮ ಪೂಜ್ಯ ಜೈನ ಮುನಿಗಳ ಭವ್ಯ ನಗರ ಪ್ರವೇಶ ಕಾರ್ಯಕ್ರಮವು ಅತ್ಯಂತ ಸಡಗರ ಹಾಗೂ ಭಕ್ತಿಭಾವದಿಂದ ಯಶಸ್ವಿಯಾಗಿ ನೆರವೇರಿತು.

ಪರಮ ಪೂಜ್ಯ 451 ದೀಕ್ಷಾ ದಾನೇಶ್ವರಿ ಆಚಾರ್ಯ ದೇವ್ ಶ್ರೀ ಗುಣರತ್ನಸೂರಿಜೀ ಮಹಾರಾಜ್ ಅವರ ಶಿಷ್ಯರಾದ ಪರಮ ಪೂಜ್ಯ ಶ್ರೀ ಗೌತಮರತ್ನವಿಜಯಜೀ, ಶ್ರೀ ಸುಧರ್ಮರತ್ನ ವಿಜಯಜೀ ಹಾಗೂ ಶ್ರೀ ತ್ರಿಭುವನರತ್ನ ವಿಜಯಜೀ ಮಹಾರಾಜ್ ಸೇರಿದಂತೆ ಠಾಣಾ-7 ರ ಮುನಿವರ್ಯರು ಇಂದು ಬೆಳಿಗ್ಗೆ ಬೆಳಗಾವಿ ನಗರವನ್ನು ಪ್ರವೇಶಿಸಿದರು. ನಗರದ ಕೊಲ್ಹಾಪುರ ಸರ್ಕಲ್’ಗೆ ಆಗಮಿಸಿದ ಮುನಿಗಳನ್ನು ಜೈನ ಸಮಾಜದ ಮುಖಂಡರು ಹಾಗೂ ಭಕ್ತಾದಿಗಳು ಭವ್ಯವಾಗಿ ಬರಮಾಡಿಕೊಂಡರು. ಅಲ್ಲಿಂದ ವಾದ್ಯ-ಮೇಳಗಳೊಂದಿಗೆ ಹೊರಟ ಮಂಗಳಕರ ಮೆರವಣಿಗೆಯು ಸದಾಶಿವ ನಗರದ ಶ್ರೀ ಸಂಭವನಾಥ ಜೈನ ಮಂದಿರವನ್ನು ತಲುಪಿತು. ಮುನಿಗಳ ಮೊದಲ ಭೇಟಿಯ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.


ಮಹಿಳೆಯರು ಸಾಂಪ್ರದಾಯಿಕ ಬಾಂಧನಿ ಸೀರೆಯನ್ನು ಹಾಗೂ ಪುರುಷರು ಬಿಳಿ ಕುರ್ತಾ ಪೈಜಾಮ ಧರಿಸಿ ಶಿಸ್ತಿನಿಂದ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಜೂನ್ 18 ರಂದು ನಡೆಯಲಿರುವ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಇಂದು ‘ಜಾಜಮ್ ಬಿಡಿಸುವ’ ಮತ್ತು ‘ಮುನಿಮ್‌ಜೀ ಆಗುವ’ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ಕಾರ್ಯಕ್ರಮದ ನಂತರ ಮಂಗಲ್’ದೀಪ್ ರೆಸಿಡೆನ್ಸಿಯಲ್ಲಿ ಶಾಹ ಸರೇಮಲ್‌ಜೀ ಪ್ರತಾಪ್‌ಜೀ ಪರಿವಾರದ ವತಿಯಿಂದ ಸಾರ್ವಜನಿಕ ನವಕಾರಸಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಶ್ರೀ ಚಂದ್ರಪ್ರಭ ಜೈನ ಮೂರ್ತಿಪೂಜಕ ಸಂಘವು ಇಡೀ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿತ್ತು.

ಈ ಐತಿಹಾಸಿಕ ಧಾರ್ಮಿಕ ಉತ್ಸವದಲ್ಲಿ ಶ್ರೀ ಜೈನ ನವಯುವಕ ಮಂಡl, ಶ್ರೀ ವರ್ಧಮಾನ ಭಕ್ತಿ ಮಂಡಲ, ಆರಾಧನಾ ಗ್ರೂಪ್ ಹಾಗೂ ಮಹಿಳಾ ಮಂಡಲದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

Tags:

error: Content is protected !!