ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ಮತ್ತು ಕೆಲವು ಸಚಿವರ ಅಸಮಾಧಾನದ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಸಿದ್ದರಾಮಯ್ಯ ಅವರು ಪರಿಸ್ಥಿತಿಯನ್ನು ಸರಿಪಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಮೋಷನ್ ಬಯಕೆ ಸಾಮಾನ್ಯವಾಗಿದ್ದರೂ, ಎಲ್ಲರಿಗೂ ನೀಡಲು ಸಾಧ್ಯವಿಲ್ಲ ಎಂದ ಜಾರಕಿಹೊಳಿ, ತನಗೆ ಯಾವುದೇ ಅಸಮಾಧಾನವಿಲ್ಲ ಮತ್ತು ರಾಜೀನಾಮೆ ನೀಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ಸಚಿವ ಸ್ಥಾನದ ರಾಜೀನಾಮೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅತ್ಯಂತ ಹಗುರವಾಗಿ ಉತ್ತರಿಸಿದ ಜಾರಕಿಹೊಳಿ, “ಅವರು ರಾಜೀನಾಮೆ ಕೊಟ್ಟಿದ್ದಾರೆ ಅಷ್ಟೇ. ಆದರೆ ಈ ಇಡೀ ಪರಿಸ್ಥಿತಿಯನ್ನು ಸಮಾಧಾನಪಡಿಸುವ ಹಾಗೂ ಪರ್ಯಾಯ ವ್ಯವಸ್ಥೆ ಮಾಡುವ ಸಂಪೂರ್ಣ ಸಾಮರ್ಥ್ಯ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇದೆ. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳು ಸರಿಹೋಗುತ್ತವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಸಚಿವ ಕೆ.ಎಚ್. ಮುನಿಯಪ್ಪ ಅವರ ಅಸಮಾಧಾನದ ಕುರಿತು ಮಾತನಾಡಿದ ಅವರು, “ರಾಜಕಾರಣದಲ್ಲಿ ಪ್ರಮೋಷನ್ ಅಥವಾ ಉನ್ನತ ಹುದ್ದೆಗಳ ಬಯಕೆ ಇರುವುದು ತೀರಾ ಸಾಮಾನ್ಯ. ಆದರೆ ಎಲ್ಲರಿಗೂ ಉನ್ನತ ಸ್ಥಾನಗಳನ್ನು ನೀಡಲು ಸಾಧ್ಯವಿಲ್ಲ, ಕೆಲವರಿಗೆ ಮಾತ್ರ ಅದು ಲಭ್ಯವಾಗುತ್ತದೆ. ಈ ಎಲ್ಲ ಗೊಂದಲಗಳನ್ನು ಸಿಎಂ ಬಗೆಹರಿಸಲಿದ್ದಾರೆ, ಅಲ್ಲಿಯವರೆಗೆ ಒಂದು-ಎರಡು ದಿನ ಕಾಯೋಣ” ಎಂದು ಹೇಳಿದ್ದಾರೆ.
ನಿಮಗೆ ಡಿಸಿಎಂ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದಿರುವುದು ಅಸಮಾಧಾನ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಆಸೆ ಇತ್ತು, ಆದರೆ ಏನು ಮಾಡಲಿಕ್ಕೆ ಆಗಲ್ಲ. ಸಿಕ್ಕಿದ್ದಕ್ಕೆ ಸಮಾಧಾನ, ತೃಪ್ತಿ ಪಡಬೇಕು ಅಷ್ಟೇ” ಎಂದು ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳ ಬಗ್ಗೆ ಹೇಳಿದ್ದಾರೆ. ಅಲ್ಲದೆ, ತಾವು ರಾಜೀನಾಮೆ ನೀಡುವ ಬಗ್ಗೆ ಸ್ಪಷ್ಟವಾಗಿ ನಿರಾಕರಿಸಿದ ಸಚಿವರು, “ರಾಜೀನಾಮೆ ಯಾಕೆ ಕೊಡಬೇಕು? ಅದರ ಅವಶ್ಯಕತೆ ಇಲ್ಲ. ನಮಗೆ ಯಾವ ಖಾತೆ ಇದೆಯೋ, ಅದನ್ನೇ ಮುಂದುವರಿಸಿದ್ದಾರೆ, ನಾನು ಕೆಲಸ ಮಾಡುತ್ತೇನೆ” ಎಂದರು.
ಸಚಿವರುಗಳಲ್ಲಿ ಮೊದಲು ನೊಂದವರು ನೀವು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವುದೇ ನೋವೂ ಇಲ್ಲ, ಸಂತೋಷವೂ ಇಲ್ಲ, ದುಃಖವೂ ಇಲ್ಲ ಎಂದು ಹೇಳುವ ಮೂಲಕ ಪ್ರಸ್ತುತ ರಾಜಕೀಯ ಹೈಡ್ರಾಮಾದ ನಡುವೆ ತಾವು ಸಂಪೂರ್ಣ ಸಮಚಿತ್ತದಿಂದ ಇರುವುದಾಗಿ ಈ ಮೂಲಕ ಹೇಳಿಕೊಂಡಿದ್ದಾರೆ.
