ಕಾಗವಾಡ ತಾಲೂಕು ಪಂಚಾಯಿತಿಯ 2026-27ನೇ ಸಾಲಿನ ಸಾಮಾನ್ಯ ಸಭೆಯು ಬೆಳಗಾವಿ ಜಿಲ್ಲಾ ಪಂಚಾಯಿತಿಯ ಅಭಿವೃದ್ಧಿ ಆಡಳಿತಾಧಿಕಾರಿ ಬಸವರಾಜ ಅಡವಿಮಠ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಗುರುವಾರದಂದು ಕಾಗವಾಡದ ಸರ್ಕಾರಿ ವಿಶ್ರಾಂತಿ ಗೃಹದಲ್ಲಿ ಜರುಗಿದ ಈ ಸಾಮಾನ್ಯ ಸಭೆಯಲ್ಲಿ ಲಿಂಕ್ ಡಾಕ್ಯುಮೆಂಟ್ಸ್ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲಾಯಿತು. ಸಭೆಯಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಮತ್ತು ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮತ್ತು ಲಿಂಕ್ ಡಾಕ್ಯೂಮೆಂಟ್ಸ್ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಪ್ರಸಕ್ತ ವರ್ಷದಲ್ಲಿ ಒಟ್ಟು 61.29 ಕೋಟಿ ರೂಪಾಯಿ ವೆಚ್ಚದ ಯೋಜನೆಯಿದೆ ಎಂದು ತಿಳಿಸಿದರು. ಇದರಲ್ಲಿ ತಾಲೂಕಿನ ಎಲ್ಲಾ ಸಿಬ್ಬಂದಿಗಳ ವೇತನಕ್ಕಾಗಿ 56.05 ಕೋಟಿ ರೂಪಾಯಿ ಹಾಗೂ ವೇತನೇತರ ಇತರ ವೆಚ್ಚಗಳಿಗಾಗಿ 1.42 ಕೋಟಿ ರೂಪಾಯಿ ನಿಗದಿಯಾಗಿದೆ. ಹಾಗೆಯೇ, ಪರಿಶಿಷ್ಟ ಜಾತಿ ಮತ್ತು ಗಿರಿಜನ ಉಪ ಯೋಜನೆ (SCSP/TSP) ಅಡಿಯಲ್ಲಿ ವಿವಿಧ ಕಾಮಗಾರಿಗಳಿಗಾಗಿ 3.81 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ ಎಂದು ಸಭೆಗೆ ವಿವರಿಸಿದರು.
ಕಾಗವಾಡ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ ಅವರು ಪ್ರಸಕ್ತ ವರ್ಷದ 61.29 ಕೋಟಿ ರೂಪಾಯಿಗಳ ಲಿಂಕ್ ಡಾಕ್ಯುಮೆಂಟ್ಸ್ ಬಜೆಟ್ ಕುರಿತು ಸಭೆಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಸಭೆಯಲ್ಲಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ. ಮದಭಾವಿ, ನೀರು ಸರಬರಾಜು ಇಲಾಖೆಯ ಅಧಿಕಾರಿ ರವೀಂದ್ರ ಮುರುಗಾಲಿ, ಅರಣ್ಯ ಇಲಾಖೆಯ ರಮೇಶ ಅರ್ಜುನವಾಡ್, ಮಲ್ಲಪ್ಪ ತೇಲಿ, ಪಿ.ಎಸ್. ಪತ್ತಾರ್, ಕೃಷಿ ಇಲಾಖೆಯ ಲಿಂಗಣ್ಣ ಬಿರಾದಾರ್, ತೋಟಗಾರಿಕೆ ಇಲಾಖೆಯ ಗೌತಮಿ ಶಿರಗಾಂವಿ, ವೆಂಕಟೇಶ್ ಕುಲಕರ್ಣಿ ಸೇರಿದಂತೆ ಮಂಗಸುಳಿ, ಶಿರುಗುಪ್ಪಿ, ಜುಗುಳ, ಉಗಾರ್, ಕುಸನಾಳ, ಮೋಳೆ, ಕೃಷ್ಣಾ ಕಿತ್ತೂರ್, ಕೆಂಪವಾಡ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಹಾಗೂ ಇತರ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಪ್ರಗತಿ ಪರಿಶೀಲನೆ ಕುರಿತು ಸುದೀರ್ಘವಾಗಿ ಚರ್ಚಿಸಿದರು. ತಾಲೂಕು ಪಂಚಾಯಿತಿಯ ಸಹಾಯಕ ಅಧಿಕಾರಿ ಎ.ಡಿ. ಅನ್ಸಾರಿ ಅವರು ಸಭೆಯ ಕುರಿತು ಮಾಹಿತಿ ನೀಡಿ, ಎಲ್ಲರನ್ನೂ ಸ್ವಾಗತಿಸಿದರು.
ಇದೇ ವೇಳೆ ಕುಡಿಯುವ ನೀರು, ಕೃಷಿ ಇಲಾಖೆಯ ವತಿಯಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಯ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಸವರಾಜ್ ಅಡವಿಮಠ ಅವರು, ಸಾಮಾನ್ಯ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜವಾಬ್ದಾರಿಯಿಂದ ಕೆಲಸ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ಹಾಗೂ ಸೂಚನೆಗಳನ್ನು ನೀಡಿದರು.
