ರಾಜ್ಯ ರಾಜಕಾರಣದ ಇಂದಿನ ಅತ್ಯಂತ ದೊಡ್ಡ ಸುದ್ದಿ. ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಹೈಕಮಾಂಡ್ ಅಧಿಕೃತವಾಗಿ ನೇಮಕ ಮಾಡಿದೆ.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಬೆನ್ನಲ್ಲೇ ತೆರವಾಗಿದ್ದ ಸ್ಥಾನಕ್ಕೆ ಈಗ ಹಿಂದುಳಿದ ವರ್ಗದ ಪ್ರಭಾವಿ ನಾಯಕನಿಗೆ ಸಾರಥ್ಯ ವಹಿಸಲಾಗಿದೆ.ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಸೇರಿದಂತೆ ಹಲವು ಘಟಾನುಘಟಿ ನಾಯಕರ ತೀವ್ರ ಪೈಪೋಟಿಯ ನಡುವೆಯೂ, ಕೊನೆಗೂ ಹೈಕಮಾಂಡ್ ಮೂಲ ಕಾಂಗ್ರೆಸಿಗ ಹಾಗೂ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಪಟ್ಟ ಕಟ್ಟುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ. ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ 71 ವರ್ಷದ ಹರಿಪ್ರಸಾದ್ ಅವರಿಗೆ, ಪಕ್ಷದ ಹೈಕಮಾಂಡ್ ಈಗ ಸಂಘಟನೆಯ ದೊಡ್ಡ ಜವಾಬ್ದಾರಿಯನ್ನು ಹೊರಿಸಿದೆ. ಈಡಿಗ ಸಮುದಾಯದ ಪ್ರಮುಖ ನಾಯಕರಾಗಿರುವ ಇವರ ದೆಹಲಿ ಮಟ್ಟದ ಆಪ್ತತೆ ಮತ್ತು ಹಿಂದುಳಿದ ವರ್ಗದ ಪ್ರಭಾವವನ್ನು ಪರಿಗಣಿಸಿ ಎಐಸಿಸಿ ಈ ಅಧಿಕೃತ ಘೋಷಣೆ ಹೊರಡಿಸಿದೆ.

