ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ಕೇವಲ ಡ್ರೈವರ್ ಬದಲಾಗುತ್ತಿದ್ದಾರೆಯೇ ವಿನಃ ಇಡೀ ವ್ಯವಸ್ಥೆ ಹದಗೆಟ್ಟಿದೆ ಎಂದು ಲೇವಡಿ ಮಾಡಿರುವ ಅವರು, ರಾಜ್ಯದ ಸದ್ಯದ ದುಸ್ಥಿತಿಗೆ ಸಿದ್ದರಾಮಯ್ಯನವರೇ ನೇರ ಹೊಣೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಆರ್ಥಿಕ ನೀತಿಗಳನ್ನು ಕಟುವಾಗಿ ಟೀಕಿಸಿದ ಆರ್. ಅಶೋಕ್, ಸಿದ್ದರಾಮಯ್ಯನವರು ಯಾವುದೇ ಪೂರ್ವ ನಿಯೋಜನೆಯಿಲ್ಲದೇ ಬಜೆಟ್ ಮಂಡಿಸಿ ಇಡೀ ರಾಜ್ಯವನ್ನು 7.64 ಕೋಟಿ ರೂಪಾಯಿಗಳ ಭಾರಿ ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂದರು. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರ ವೇತನಕ್ಕೂ ಹಾಗೂ ಗುತ್ತಿಗೆದಾರರ ಬಿಲ್ ಪಾವತಿಗೂ ಹಣವಿಲ್ಲದಂತಾಗಿದೆ. ಪ್ರತಿ ವರ್ಷ ಬರೋಬ್ಬರಿ 38 ಸಾವಿರ ಕೋಟಿ ರೂಪಾಯಿಗಳನ್ನು ಕೇವಲ ಬಡ್ಡಿ ಪಾವತಿಗೆ ಬಳಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗಾಗಿ 65 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿರುವ ಸರ್ಕಾರ, ಅಭಿವೃದ್ಧಿ ಕೆಲಸಗಳಿಗಾಗಿ ಕೇವಲ 84 ಕೋಟಿ ರೂಪಾಯಿಗಳನ್ನು ಮಾತ್ರ ಬಳಸಿದೆ. ಸಿದ್ದರಾಮಯ್ಯನವರು ರಾಜ್ಯಕ್ಕೆ ಒಟ್ಟು 75 ಸಾವಿರ ಕೋಟಿ ರೂಪಾಯಿಗಳ ಬಾಕಿ ಬಿಲ್ ಮೊತ್ತದ ‘ಗಿಫ್ಟ್’ ನೀಡಿದ್ದು, ಆರ್ಥಿಕತೆಯನ್ನು ಸಂಪೂರ್ಣವಾಗಿ ಬುಡಮೇಲು ಮಾಡಿದ್ದಾರೆ ಎಂದು ಅಂಕಿ-ಅಂಶಗಳ ಸಹಿತ ಆಕ್ರೋಶ ಹೊರಹಾಕಿದರು.

ಮುಂದುವರಿದು ಮಾತನಾಡಿದ ಅವರು, ಪ್ರಸಕ್ತ ಸರ್ಕಾರದ ಎಲ್ಲ ಸಚಿವರು ತಮ್ಮ ಇಲಾಖೆಗಳನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದು, ಮುಖ್ಯಮಂತ್ರಿ ಸೇರಿದಂತೆ ಇಡೀ ಸಚಿವ ಸಂಪುಟದ ಸಾಧನೆ ಶೂನ್ಯವಾಗಿದೆ. ಇವರೆಲ್ಲರೂ ಕೇವಲ ಹೈಕಮಾಂಡ್‌ನ ಎಟಿಎಂಗಳಂತೆ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಸಮನ್ವಯ ಸಮಿತಿಯ ಮೂಲಕ ಸರ್ಕಾರದಲ್ಲಿ ನಿಯಂತ್ರಣ ಸಾಧಿಸಲು ಈಗ ಉನ್ನತ ಮಟ್ಟದ ಹುದ್ದೆಗೆ ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್‌ನ ಉಳಿದ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರ ದುಪ್ಪಟ್ಟಾಗಲಿದ್ದು, ಪ್ರತಿದಿನ ರೆಬಲ್ ಶಾಸಕರ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಈ ಭ್ರಷ್ಟ ಆಡಳಿತದಿಂದ ರಾಜ್ಯದ ಜನರು ಈಗಾಗಲೇ ಬೇಸತ್ತು ಹೋಗಿದ್ದು, ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೇರುಸಹಿತ ಕಿತ್ತೆಸೆಯಲಿದ್ದಾರೆ ಎಂದು ಭವಿಷ್ಯ ನುಡಿದರು.
