State

ಬಾಗಲಕೋಟೆಯಲ್ಲಿ ಕಳ್ಳರ ಅಟ್ಟಹಾಸ: ವೃದ್ಧೆ ಕಾಲಿಗೆ ಗುಂಡೇಟು… ಫೈರಿಂಗ್ ಮಾಡಿದ ಖದೀಮನಿಗೆ ಗ್ರಾಮಸ್ಥರಿಂದ ಧರ್ಮದೇಟು!!!

Share

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ತಡರಾತ್ರಿ ಭೀಕರ ಘಟನೆಯೊಂದು ಸಂಭವಿಸಿದೆ. ಕಳ್ಳತನದ ಉದ್ದೇಶದಿಂದ ಗ್ರಾಮಕ್ಕೆ ನುಗ್ಗಿದ ಖದೀಮರ ಗ್ಯಾಂಗ್, ವೃದ್ಧ ದಂಪತಿಯ ಮೇಲೆ ಕಂಟ್ರಿ ಪಿಸ್ತೂಲ್‌ನಿಂದ ಫೈರಿಂಗ್ ನಡೆಸಿ ಆತಂಕ ಸೃಷ್ಟಿಸಿದೆ. ಸದ್ಯ ಸಾರ್ವಜನಿಕರೇ ಧೈರ್ಯದಿಂದ ಮುನ್ನುಗ್ಗಿ ಓರ್ವ ಶೂಟರ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕರಡಿಗುಡ್ಡ ಎಸ್.ಎನ್. ಗ್ರಾಮದಲ್ಲಿ ತಡರಾತ್ರಿ ಕಳ್ಳರ ಗ್ಯಾಂಗ್ ಒಂದು ಭೀಕರ ಅಟ್ಟಹಾಸ ಮೆರೆದಿದೆ. ಮೂವರು ಖದೀಮರಿದ್ದ ತಂಡವು ಮೊದಲಿಗೆ ಖಾಲಿ ಮನೆಯೊಂದರ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದೆ. ಅಲ್ಲಿ ಏನೂ ಸಿಗದಿದ್ದಾಗ, ಮನೆಯ ಹೊರಗೆ ಮಲಗಿದ್ದ ಹೊಳೆಪ್ಪ ಹಾಗೂ ಬಸವ್ವ ಮುಗಳಿ ದಂಪತಿಯ ಬಳಿ ಬಂದು ಅವರ ಮೈ ಮುಟ್ಟಿ ಪರಿಶೀಲಿಸಿದೆ. ತಕ್ಷಣ ಎಚ್ಚರಗೊಂಡ ವೃದ್ಧ ಹೊಳೆಪ್ಪ ಕಳ್ಳರನ್ನು ಪ್ರಶ್ನಿಸಿದಾಗ, ಖದೀಮರು ತಮ್ಮಲ್ಲಿದ್ದ ಕಂಟ್ರಿ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಕಳ್ಳರು ನಡೆಸಿದ ಮೂರನೇ ಬಾರಿ ಫೈರಿಂಗ್‌ನಲ್ಲಿ, ಪತಿಯ ಹಿಂದೆ ನಿಂತಿದ್ದ ಬಸವ್ವ (56) ಅವರ ಬಲಗಾಲಿಗೆ ಗುಂಡು ತಗುಲಿ ತೀವ್ರ ಗಾಯಗೊಂಡಿದ್ದಾರೆ.

ಗುಂಡಿನ ಸದ್ದಿಗೆ ತಕ್ಷಣ ಓಡೋಡಿ ಬಂದ ಗ್ರಾಮಸ್ಥರು ಸಾಹಸ ಪ್ರದರ್ಶಿಸಿ ಫೈರಿಂಗ್ ಮಾಡಿದ ಮುಖ್ಯ ಆರೋಪಿ ಪ್ರಶಾಂತ್ ನಾವಿಯನ್ನು ಹಿಡಿದು, ಹಗ್ಗದಿಂದ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ. ಆದರೆ ಇದೇ ವೇಳೆ ಇನ್ನುಳಿದ ಇಬ್ಬರು ಕಳ್ಳರು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಗಾಯಾಳು ಬಸವ್ವ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗ್ರಾಮಸ್ಥರಿಂದ ಥಳಿತಕ್ಕೊಳಗಾದ ಆರೋಪಿ ಪ್ರಶಾಂತ್‌ನನ್ನು ಬಾದಾಮಿ ಆಸ್ಪತ್ರೆಗೆ ಸೇರಿಸಲಾಗಿದೆ. ಬಂಧಿತ ಆರೋಪಿ ವಿಜಯಪುರ ಜಿಲ್ಲೆಯ ದೇವರನಿಂಬರಗಿ ಗ್ರಾಮದವನಾಗಿದ್ದು, ಈತನ ಮೇಲೆ ಈಗಾಗಲೇ ಕೊಲೆ, ಕಳ್ಳತನ ಹಾಗೂ ಬಂದೂಕು ಪೂರೈಕೆಯ ಹಲವು ಪ್ರಕರಣಗಳಿರುವುದು ಬೆಳಕಿಗೆ ಬಂದಿದೆ. ಬಾದಾಮಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ.

Tags:

error: Content is protected !!