ರಾಯಚೂರು: ಪುಣ್ಯಕ್ಷೇತ್ರ ಮಂತ್ರಾಲಯದ ಬಳಿ ಘೋರ ದುರಂತವೊಂದು ಸಂಭವಿಸಿದೆ. ತುಂಗಭದ್ರಾ ನದಿಗೆ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನೀರುಪಾಲಾಗಿದ್ದಾರೆ.

ಮಂತ್ರಾಲಯದಲ್ಲಿ ಆಯೋಜಿಸಲಾಗಿದ್ದ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು, ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ಕಣ್ಣೆದುರಲ್ಲೇ ಜಲಸಮಾಧಿಯಾದ ದಾರುಣ ಘಟನೆ ನಡೆದಿದೆ. ಹೈದರಾಬಾದ್ ಮೂಲದ ಚಂದ್ರ (5), ಸತೀಶ್ (35), ಉರವಕೊಂಡದ ಸಂಧ್ಯಾ (22) ಹಾಗೂ ಮಂತ್ರಾಲಯದ ರಾಘವೇಂದ್ರ (25) ಮತ್ತು ಧನುಷ್ (23) ನದಿಯ ನೀರಿನ ಆಳ ತಿಳಿಯದೇ ಮುಳುಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ನದಿಯ ನೀರಿನ ಆಳದ ಅಂದಾಜು ಸಿಗದೇ ಐವರು ನೀರಿನಲ್ಲಿ ಮುಳುಗುತ್ತಿದ್ದಾಗ ಅಪರ್ಣಾ ಎಂಬ ಯುವತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಸದ್ಯ ಘಟನಾ ಸ್ಥಳದಿಂದ ಧನುಷ್ ಎಂಬ ಯುವಕನ ಮೃತದೇಹವನ್ನು ಹೊರತೆಗೆಯಲಾಗಿದ್ದು, ಉಳಿದ ನಾಲ್ವರಿಗಾಗಿ ಸ್ಥಳೀಯ ಮೀನುಗಾರರು ಹಾಗೂ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ದುರಂತದ ಹಿನ್ನೆಲೆಯಲ್ಲಿ ಎಮ್ಮಿಗನೂರು ಡಿವೈಎಸ್ಪಿ ಭಾರ್ಗವಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಣ್ಣೆದುರೇ ಇಡೀ ಕುಟುಂಬ ನದಿಯಲ್ಲಿ ಕೊಚ್ಚಿಹೋದದ್ದನ್ನು ಕಂಡು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
