BELAGAVI

ಬೆಳಗಾವಿ ಕ್ಯಾಂಟೋನ್ಮೆಂಟ್‌ನಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ: ಸಾರ್ವಜನಿಕ ಆಸ್ತಿ ಹಾಳುಗೆಡಹುವವರ ವಿರುದ್ಧ ಸಿಇಒ ಗರಂ!

Share

ಬೆಳಗಾವಿ ಕ್ಯಾಂಟೋನ್ಮೆಂಟ್ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ಮತ್ತು ಸ್ವಚ್ಛವಾಗಿಡಲು ದಂಡು ಮಂಡಳಿ ಈಗ ಮಹತ್ವದ ಹೆಜ್ಜೆ ಇಟ್ಟಿದೆ. ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆ ಹಾಗೂ ನಿರ್ವಹಣೆಗಾಗಿ ಸಿಇಒ ಸುದಾಮ್ ಹರಿವಿಜಯ್ ಮಂಚಾಲವಾರ್ ಅವರ ನೇತೃತ್ವದಲ್ಲಿ ಇಂದು ಬೆಳ್ಳಂಬೆಳಗ್ಗೆ ವಿಶೇಷ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿದೆ.

ಬೆಳಗಾವಿ ದಂಡು ಮಂಡಳಿ ವ್ಯಾಪ್ತಿಯಲ್ಲಿ ಇಂದಿನಿಂದ ಸಾರ್ವಜನಿಕ ಶೌಚಾಲಯಗಳ ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸಿಇಒ ಸುದಾಮ್ ಹರಿವಿಜಯ್ ಮಂಚಾಲವಾರ್ ಅವರ ಮಾರ್ಗದರ್ಶನದಲ್ಲಿ, ಸಫಾಯಿ ಕರ್ಮಚಾರಿಗಳು ಮುಂಜಾನೆ ೬ ಗಂಟೆಯಿಂದಲೇ ಪೋಸ್ಟ್‌ಮನ್ ಸರ್ಕಲ್, ಇಸ್ಲಾಮಿಯಾ ಹೈಸ್ಕೂಲ್, ಬೋಗಾರವೇಸ್, ಪಿಕೆಟ್ ರಸ್ತೆ ಮತ್ತು ಮೀನು ಮಾರುಕಟ್ಟೆ ಬಳಿಯ ಸಾರ್ವಜನಿಕ ಶೌಚಾಲಯಗಳನ್ನು ಜೆಟ್ ಕ್ಲೀನಿಂಗ್ ಯಂತ್ರಗಳು ಹಾಗೂ ಸೋಂಕುನಿವಾರಕಗಳನ್ನು ಬಳಸಿ ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ. ನಿತ್ಯದ ಕಸ ಸಂಗ್ರಹಣೆಯ ಬೆನ್ನಲ್ಲೇ ಈ ಕಠಿಣ ಸವಾಲನ್ನು ಸಿಬ್ಬಂದಿಗಳು ಯಶಸ್ವಿಯಾಗಿ ಪೂರೈಸಿದ್ದಾರೆ.


ಇದೇ ವೇಳೆ ಶೌಚಾಲಯಗಳಲ್ಲಿ ಗುಟ್ಕಾ ತಿಂದು ಉಗುಳುವುದು, ಮದ್ಯದ ಬಾಟಲಿ ಹಾಗೂ ಸಿಗರೇಟ್ ಪ್ಯಾಕೆಟ್‌ಗಳನ್ನು ಎಸೆಯುವುದರಿಂದ ಒಳಚರಂಡಿ ಬ್ಲಾಕ್ ಆಗುತ್ತಿದ್ದು, ರೋಗರುಜಿನಗಳ ಭೀತಿ ಎದುರಾಗಿದೆ ಎಂದು ಮಂಡಳಿ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಕೆಲವು ಸಮಾಜವಿರೋಧಿ ಶಕ್ತಿಗಳು ಶೌಚಾಲಯದ ಟೈಲ್ಸ್ ಒಡೆಯುವುದು ಮತ್ತು ಬಾಗಿಲುಗಳನ್ನು ಬೆಂಕಿಯಿಂದ ಸುಟ್ಟು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಟೋನ್ಮೆಂಟ್ ಅನ್ನು ಸ್ವಚ್ಛ ಮತ್ತು ಹಸಿರಾಗಿಡಲು ನಾಗರಿಕರು ಜವಾಬ್ದಾರಿಯಿಂದ ವರ್ತಿಸಬೇಕು ಹಾಗೂ ಸ್ವಚ್ಛತೆಯನ್ನು ಕಾಪಾಡಲು ಸಹಕರಿಸಬೇಕೆಂದು ಸಿಇಒ ಮನವಿ ಮಾಡಿದ್ದಾರೆ.

Tags:

error: Content is protected !!