ಬೆಳಗಾವಿ: ಸುಪ್ರೀಂ ಕೋರ್ಟ್ನಲ್ಲಿ ಗಡಿ ಪ್ರಕರಣದ ವಿಚಾರಣೆಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಏಕನಾಥ್ ಶಿಂಧೆ ಅವರೊಂದಿಗೆ ಮುಂಬರುವ 15 ದಿನಗಳಲ್ಲಿ ಮಹತ್ವದ ಸಭೆ ಆಯೋಜಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಸೌಹಾರ್ದಯುತವಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಲು ಅವಕಾಶ ಕೋರುವುದಾಗಿ ಮಹಾರಾಷ್ಟ್ರದ ಕೈಗಾರಿಕೆ ಮತ್ತು ಮರಾಠಿ ಭಾಷಾ ಸಚಿವರಾದ ಉದಯ್ ಸಾಮಂತ್ ಅವರು ತಿಳಿಸಿದ್ದು, ಈ ಬೆನ್ನಲ್ಲೇ ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ.

ಇಂದು ಬೆಳಗಾವಿಯ ಮಹಾರಾಷ್ಟ್ರದ ಕೈಗಾರಿಕೆ ಮತ್ತು ಮರಾಠಿ ಭಾಷಾ ಸಚಿವರಾದ ಉದಯ್ ಸಾಮಂತ್ ಅವರು ಆಗಮಿಸಿದ್ದರು. ಈ ವೇಳೆ ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿಯೂ ಅವರನ್ನು ಭೇಟಿಯಾಗಿ ಗಡಿವಿವಾದದ ಪ್ರಕರಣವನ್ನು ಸುಪ್ರೀಂ ಕೋರ್ಟಿನಲ್ಲಿ ಶೀಘ್ರದಲ್ಲೇ ವಿಚಾರಣೆಗೆ ತೆಗೆದುಕೊಂಡು ನ್ಯಾಯ ಒದಗಿಸಬೇಕೆಂದು ಮನವಿ ಮಾಡಿತು.

ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಮಹಾರಾಷ್ಟ್ರದ ಕೈಗಾರಿಕೆ ಮತ್ತು ಮರಾಠಿ ಭಾಷಾ ಸಚಿವರಾದ ಉದಯ್ ಸಾಮಂತ್ ಅವರು ಸುಪ್ರೀಂಕೋರ್ಟಿನಲ್ಲಿ ಗಡಿ ವಿವಾದ ಪ್ರಕರಣವನ್ನು ಶೀಘ್ರದಲ್ಲೇ ವಿಚಾರಣೆ ನಡೆಸಬೇಕೆಂಬ ಬೆಳಗಾವಿ ಗಡಿಭಾಗದ ಮರಾಠಿ ಭಾಷಿಕರ ಒತ್ತಾಯಕ್ಕೆ ನಾವು ಬೆಂಬಲ ಸೂಚಿಸುತ್ತೇವೆ. ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆ ಮಹಾರಾಷ್ಟ್ರದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಬೆಳಗಾವಿಯ ಮರಾಠಿ ಭಾಷಿಕರು ಪ್ರತಿಭಟನೆ ನಡೆಸುವ ಯಾವುದೇ ಅವಶ್ಯಕತೆಯಿಲ್ಲ. ಮುಂಬೈಗೆ ತೆರಳಿದ ಬಳಿಕ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆ ಪ್ರಮುಖ ಏಕನಾಥ್ ಶಿಂಧೆ ಅವರಿಗೆ ಶೀಘ್ರದಲ್ಲೇ ಸಭೆ ಕರೆಯಲು ಪ್ರಸ್ತಾಪಿಸಲಾಗುವುದು ಅಲ್ಲದೇ ಅವರ ಭೇಟಿಯನ್ನು ಮುಂಬರುವ 15 ದಿನಗಳಲ್ಲಿ ಮಾಡಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದು, ಸದ್ಯ ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ.
ಇನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳೊಂದಿಗೆ ಈ ವಿಷಯವಾಗಿ ಚರ್ಚಿಸಲು ಸನ್ಮಾನಪೂರ್ವಕವಾಗಿ ಅವಕಾಶವನ್ನು ಕೇಳುತ್ತೇನೆ. ನಾವು ಇಲ್ಲಿ ಸರ್ಕಾರದ ವಿರುದ್ಧ ಟೀಕಿಸಲು ಇಲ್ಲಿಗೆ ಬಂದಿಲ್ಲ. ಮರಾಠಿ ಭಾಷಿಕರಿಗೆ ಮರಾಠಿ ಭಾಷೆಯನ್ನು ಬಳಸಲು ಅವಕಾಶ ನೀಡಬೇಕು. ಸರ್ಕಾರ ಮರಾಠಿ ಭಾಷಿಕರಿಗೆ ಮತ್ತು ಮರಾಠಿ ಭಾಷಿಕರು ಸರ್ಕಾರಕ್ಕೆ ತೊಂದರೆಯಾಗದಂತೆ ವರ್ತಿಸಬೇಕು. ಉಭಯತರಲ್ಲಿ ಸಮನ್ವಯ ಸಾಧಿಸಬೇಕು. ನಮ್ಮ ಜನರಿಗೆ ನ್ಯಾಯ ಸಿಗಬೇಕೆಂಬುದು ನನ್ನ ಉದ್ಧೇಶವಾಗಿದೆ ಎಂದರು.
