ಆಂಕರ್: ಸೌಹಾರ್ದತೆ ಮತ್ತು ತ್ಯಾಗದ ಪ್ರತೀಕವಾದ ಈದ್-ಉಲ್-ಅದ್ಹಾ ಅಂದರೆ ಬಕ್ರೀದ್ ಹಬ್ಬವನ್ನು ಬೆಳಗಾವಿ ನಗರ ಸೇರಿದಂತೆ ಜಿಲ್ಲಾದ್ಯಂತ ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.


ದೊಡ್ಡ ಹಬ್ಬ ಅಥವಾ ತ್ಯಾಗದ ಹಬ್ಬ ಎಂದೇ ಕರೆಯಲಾಗುವ ಈದ್-ಉಲ್-ಅದ್ಹಾ (ಬಕ್ರೀದ್) ಹಬ್ಬವನ್ನು ಬೆಳಗಾವಿ ನಗರ ಹಾಗೂ ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಸೌಹಾರ್ದತೆಯಿಂದ ಆಚರಿಸಿದರು.ಪ್ರವಾದಿ ಇಬ್ರಾಹಿಂ ಅವರ ಅಪ್ರತಿಮ ತ್ಯಾಗ ಮತ್ತು ದೇವರ ಮೇಲಿನ ಅಚಲ ನಂಬಿಕೆಯನ್ನು ಸ್ಮರಿಸುವ ಉದ್ದೇಶದಿಂದ ಆಚರಿಸಲಾಗುವ ಈ ಹಬ್ಬದ ಅಂಗವಾಗಿ, ಮುಸ್ಲಿಮರು ಮುಂಜಾನೆಯೇ ಹೊಸ ಬಟ್ಟೆಗಳನ್ನು ಧರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆಯ ನಂತರ ಪರಸ್ಪರ ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಬ್ಬದ ಪ್ರಮುಖ ಅಂಗವಾಗಿ ದೇವರಿಗೆ ಕುರ್ಬಾನಿ ನೀಡಲಾಯಿತು. ಬೆಳಗಾವಿಯಲ್ಲಿ ಇಂದು ಸಮಸ್ತ ಇಸ್ಲಾಂ ಧರ್ಮೀಯರಿಂದ ಈದ್ ಉಲ್ ಅದಹಾ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು. ಬೆಳಗಾವಿಯ ಅಂಜುಮನ್ –ಎ-ಇಸ್ಲಾಂನ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ ಅದಾ ಮಾಡಲಾಯಿತು.
ಈದ್ ಉಲ್ ಅದಹಾ ಹಬ್ಬವು ತ್ಯಾಗ ಬಲಿದಾನದ ಪ್ರತೀಕವಾಗಿದೆ. ದೇವರ ಬಗ್ಗೆ ಪ್ರೀತಿ ವಿಶ್ವಾಸವನ್ನು ಹೊಂದಿದ ವ್ಯಕ್ತಿಯೂ ಇಂದಿನ ದಿನ ತನ್ನೇಲ್ಲ ಕೆಟ್ಟ ಗುಣಗಳನ್ನು ಬಿಟ್ಟು ಒಳ್ಳೆಯದ್ದನ್ನು ತನ್ನದಾಗಿಸಿಕೊಳ್ಳುತ್ತಾನೆ. ಕೇವಲ ಬಲಿದಾನ ಈ ಹಬ್ಬದ ಪ್ರಾಮುಖ್ಯತೆಯಲ್ಲದೇ, ಸ್ವಚ್ಛತೆ-ಸುಂದರತೆಯೂ ಕೂಡ ಪ್ರಾಮುಖ್ಯವಾಗಿದೆ. ಬೇರೆಯವರಿಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಿ ಎಂದು ಸಮಾಜದ ಪ್ರಮುಖರು ಕರೆ ನೀಡಿದರು.
ಇನ್ನೋರ್ವ ಹಿರಿಯರು ಮಾತನಾಡಿ ಈದ್ ಉಲ್ ಫಿತರ್ ನಂತರ ಬರುವ ಈದ್ ಉಲ್ ಅದಹಾದ ಇತಿಹಾಸವನ್ನು ತಿಳಿಸಿದರು. ಬಲಿದಾನವೂ ಕೇವಲ ಭೋಜನಕ್ಕೆ ಸಿಮೀತವಾಗಿಲ್ಲ. ಬಲಿದಾನವೂ ತ್ಯಾಗದ ಪ್ರತೀಕವಾಗಿದೆ. ನಮ್ಮ ಸಂತಸ ಬೇರೆಯವರಿಗೆ ತೊಂದರೆಯಾಗಬಾರದು. ಶಾಂತಿ ಸೌಹಾರ್ದತೆಯೊಂದಿಗೆ ಈ ಹಬ್ಬವನ್ನು ಆಚರಿಸಬೇಕು ಎಂದರು.
ಉತ್ತರ ಶಾಸಕ ಆಸೀಫ್ ಸೇಠ್ ಅವರು ಎಲ್ಲರಿಗೂ ಈದ್ ಉಲ್ ಅದಹಾದ ಶುಭಾಷಯಗಳನ್ನು ನೀಡಿದರು. ನಮ್ಮ ದೇಶವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದು ಕರೆ ನೀಡಿದರು.
ಇನ್ನು ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು, ಬಕ್ರೀದ್ ಹಿನ್ನೆಲೆ ಬೆಳಗಾವಿಯಲ್ಲಿ ಖಡಕ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಅತ್ಯಂತ ಸಡಗರದಿಂದ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಹೇಳುತ್ತ ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಷಯಗಳನ್ನು ಕೋರಿದರು.
ಮಾಜಿ ಶಾಸಕ ಫಿರೋಝ್ ಸೇಠ್ ಯುವಾ ಕಾಂಗ್ರೆಸ್ ನಾಯಕ ಫೈಝಾನ್ ಸೇಠ್, ಅಮಾನ್ ಸೇಠ್ ಅವರು ಕೂಡ ಈದ್ ಉಲ್ ಅದಹಾದ ಶುಭಾಷಯಗಳನ್ನು ಕೋರಿದರು.
ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
