ಹಳೆ ವೈಷಮ್ಯದ ಹಿನ್ನೆಲೆ ಯುವಕನೊಬ್ಬನನ್ನು ನಿರ್ಜನ ಪ್ರದೇಶಕ್ಕೆ ಕರೆಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಹುಂಚ್ಯಾನಟ್ಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.


ಮಜಗಾಂವ ಗ್ರಾಮದ ರಾಹುಲ್ ತಳವಾರ (22) ಮೃತ ಯುವಕನಾಗಿದ್ದಾನೆ. ಹಣ ನೀಡುವುದಾಗಿ ಹೇಳಿ ಆರೋಪಿಗಳು ರಾಹುಲ್ ಅವರನ್ನು ಹುಂಚ್ಯಾನಟ್ಟಿ ಗ್ರಾಮದ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ತಲ್ವಾರ್ ನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಮಂಜುನಾಥ ಶೀತಿಮನಿ ಸೇರಿದಂತೆ ಏಳು-ಎಂಟು ಜನರು ಸೇರಿ ರಾಹುಲ್ ಮೇಲೆ ತಲ್ವಾರಿನಿಂದ ದಾಳಿ ನಡೆಸಿದ್ದಾರೆ. ತಲೆ ಹಾಗೂ ಕೈ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಹುಲ್ ಮೃತಪಟ್ಟಿದ್ದಾರೆ.

ನಮ್ಮೊಡನೆ ಹಳೆಯ ವೈಷಮ್ಯವಿತ್ತು. ಮಂಜು, ಅಭಿ, ಭೀಮಶಿ, ದ್ಯಾಮ, ಇನ್ನುಳಿದವರು ಹಲ್ಲೆ ಕರೆಸಿಕೊಂಡಿದ್ದಾರೆ. ರಾಹುಲ್ ಅಪೋಲೋದಲ್ಲಿ ಕೆಲಸ ಮಾಡುತ್ತಿದ್ದ. ಆದರೇ, ಕೆಲಸ ಬಿಟ್ಟು ನಮ್ಮೊಟ್ಟಿಗೆ ಗೂಂಡಾಗಿರಿ ಮಾಡಲು ಬಾ ಎಂದು ಕರೆಯುತ್ತಿದ್ದರು. ಆದರೇ, ರಾಹುಲ್ ಹೋಗುತ್ತಿರಲಿಲ್ಲ. ಹಣದ ವ್ಯವಹಾರ ಮುಗಿಸೋಣ ಬಾ ಎಂದು ಕರೆದು, ತಲ್ವಾರ್, ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಮೃತ ರಾಹುಲ್ ಸಂಬಂಧಿ ರೋಹಿತ್ ಹೇಳಿದರು.
ರಾಹುಲ್ ಮೊದಲಿನಿಂದಲೂ ಸಮಾಧಾನವಾಗಿದ್ದ. ಆದರೇ ಮಂಜು ಸೀತಿಮನಿ ಹಣದ ವ್ಯವಹಾರದ ಹಿನ್ನೆಲೆ ಹಿಂದೆಯೇ ಜಗಳವಾಗಿತ್ತು. ಅವರ ಮನೆಯವರಿಗೆ ಹೋಗಿ ತಾಕೀತು ಮಾಡಿ ಬಂದಿದ್ದೇವು. ಹಣದ ವ್ಯವಹಾರವಿದೆ ಹಣ ತೆಗೆದುಕೊಂಡು ಬರೋಣ ಬಾ ಎಂದು ಕರೆದು, ಸ್ಕೆಚ್ ಹಾಕಿ ಕೊಲೆ ಮಾಡಿದ್ದಾರೆ. ಮಂಜುನಾಥ ಸೀತಿಮನಿ ಕಾಲೇಜುಗಳಲ್ಲಿ ಅಲ್ಲಲ್ಲಿ ಜಗಳವಾದಲ್ಲಿ ಕಮಿಷನ್’ಗಾಗಿ ಮಧ್ಯಸ್ಥಿಕೆ ವಹಿಸುತ್ತಿದ್ದ. ಅವನು ರಾಹುಲ್ ಗೆಳೆಯನಲ್ಲ. ಪೊಲೀಸರು ತನಿಖೆಯನ್ನು ನಡೆಸಬೇಕೆಂದು ಪರಶುರಾಮ್ ಹೇಳಿದರು.
ಪೂರ್ವ ಪ್ಲಾನ್ ಮಾಡಿ ಮೋಸದಿಂದ ಕರೆಯಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಮೊದಲೂ ಕೂಡ ರಾಹುಲ್’ನೊಂದಿಗೆ ಜಗಳ ಕಾಯ್ದಿದ್ದರು ಎಂದು ನಾಗರಾಜ್ ತಳವಾರ ತಿಳಿಸಿದರು.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
