ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಐತಿಹಾಸಿಕ ಇಂಚಗೇರಿ ಮಠದಲ್ಲಿ ಕ್ರಾಂತಿಯೋಗಿ ಮಾಧವಾನಂದ ಪ್ರಭುಜಿಗಳ ಪುಣ್ಯಸ್ಮರಣೆಯನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದಲ್ಲದೆ, ಸಮಾಜ ಸುಧಾರಣೆಗೆ ಹೆಸರಾಗಿದ್ದ ಶ್ರೀಗಳ ಸ್ಮರಣೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಈ ಕುರಿತು ಒಂದು ವರದಿ ಇಲ್ಲಿದೆ.

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠದಲ್ಲಿ ಕ್ರಾಂತಿಯೋಗಿ ಮಾಧವಾನಂದ ಪ್ರಭುಜಿಗಳ ಪುಣ್ಯಸ್ಮರಣೆ ಸಡಗರ-ಸಂಭ್ರಮದಿಂದ ಜರುಗಿತು. ಕಾರ್ಯಕ್ರಮಕ್ಕೆ ರೇವಣಸಿದ್ದೇಶ್ವರ ಮಹಾರಾಜರು ಭಾಹುಸಾಹೇಬ ಮಹಾರಾಜರ ಮೂರ್ತಿ ಇರುವ ತೇರನ್ನು ಎಳೆಯುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಶ್ರೀಮಠದ ಆವರಣದಲ್ಲಿ ಸಕಲ ಮಂಗಲ ವಾದ್ಯಗಳೊಂದಿಗೆ ಮಾಧವಾನಂದ ಪ್ರಭುಜಿಗಳ ಭವ್ಯ ಪಲ್ಲಕ್ಕಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಠದ ಪ್ರಮುಖ ಧಾರ್ಮಿಕ ಗ್ರಂಥವಾದ ‘ದಾಸಬೋಧ’ ಪಠಣ ಹಾಗೂ ಹಿರಿಯರಿಂದ ಪ್ರವಚನ ಕಾರ್ಯಕ್ರಮಗಳು ನಡೆದವು.

ಕ್ರಾಂತಿಯೋಗಿ ಮಾಧವಾನಂದ ಪ್ರಭುಜಿಗಳು ಕೇವಲ ಮಠದ ಗುರುಗಳಾಗಿರದೆ ಭಾರತ ಸ್ವಾತಂತ್ರ್ಯ, ಗೋವಾ ವಿಮೋಚನೆ, ರಜಾಕರ ಹಾವಳಿ, ಸಂಸ್ಥಾನಗಳ ವಿಲೀನಿಕರಣ, ಮೈಸೂರು ಕರ್ನಾಟಕವಾಗಬೇಕು ಎಂದು ಉಪವಾಸ ಸತ್ಯಾಗ್ರಹ ಮಾಡಿದ್ದರು.. ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಹೋರಾಟಕ್ಕೆ ಬಂದೂಕು ಕಾರ್ಖಾನೆಗಳನ್ನ ತೆರೆದು ಶಸಸ್ತ್ರವಾಗಿ ಧೀರೋದಾತ್ತವಾಗಿ ಹೋರಾಡಿದ ದೇಶಪ್ರೇಮಿಯಾಗಿದ್ದರು. ಮಠದ ಮೂಲಕವೇ ಕ್ರಾಂತಿಯ ಕಿಡಿ ಹೊತ್ತಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಸಮಾಜದಲ್ಲಿನ ಜಾತಿ ಪದ್ಧತಿ ಮತ್ತು ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದ್ದ ಶ್ರೀಗಳು, ತಮ್ಮ ಜೀವಿತಾವಧಿಯಲ್ಲಿ ಬರೋಬ್ಬರಿ 25 ಸಾವಿರಕ್ಕೂ ಅಧಿಕ ಅಂತರ್ ಧರ್ಮೀಯ ಹಾಗೂ ಅಂತರ್ ಜಾತಿ ವಿವಾಹಗಳನ್ನು ನೆರವೇರಿಸುವ ಮೂಲಕ ಕ್ರಾಂತಿಕಾರಿ ಸಮಾಜ ಸುಧಾರಕರಾಗಿ ಇತಿಹಾಸ ನಿರ್ಮಿಸಿದ್ದಾರೆ.
ಶ್ರದ್ಧೆ, ಭಕ್ತಿ ಮತ್ತು ದೇಶಪ್ರೇಮದ ಸಂಗಮದಂತಿದ್ದ ಈ ಪುಣ್ಯಸ್ಮರಣೆ ಮಹೋತ್ಸವದಲ್ಲಿ ಹತ್ತಾರು ಹಳ್ಳಿಗಳ ಸಾವಿರಾರು ಭಕ್ತರು ಭಾಗವಹಿಸಿ ಶ್ರೀಗಳ ಕೃಪೆಗೆ ಪಾತ್ರರಾದರು.
