ಆ್ಯಂಕರ್: ಎರಡು ತಿಂಗಳ ಬೇಸಿಗೆ ರಜೆಯ ಮೌನ ಮುಗಿದು, ವಿಜಯಪುರ ನಗರದ ಶಾಲಾ ಆವರಣಗಳು ಮತ್ತೆ ಚಿಣ್ಣರ ಚಿಲಿಪಿಲಿ ಧ್ವನಿಯಿಂದ ಕಂಗೊಳಿಸಿದವು. ಮನೆಗಿಂತ ಶಾಲೆಯೇ ಮೇಳ ಎನ್ನುವಂತೆ, ಇಂದು ವಿದ್ಯಾರ್ಥಿಗಳು ಹೊಸ ಉತ್ಸಾಹದೊಂದಿಗೆ ಶಾಲೆಗಳಿಗೆ ಆಗಮಿಸಿದರು. ಕೆಲ ಪುಟಾಣಿಗಳು ತಾಯಿಯ ಕೈ ಬಿಡಲು ಒಲ್ಲದೆ ಕಣ್ಣೀರಿನ ಹನಿಗಳನ್ನು ಸುರಿಸಿದರೆ, ಇನ್ನೂ ಕೆಲವರು ಹಕ್ಕಿಯಂತೆ ಹಾರಾಡುತ್ತಾ ಗೆಳೆಯರ ಭೇಟಿಗೆ ಕಾತರದಿಂದ ಶಾಲೆ ಪ್ರವೇಶಿಸಿದರು. ಈ ಕುರಿತು ಇಲ್ಲಿದೆ ಒಂದು ವರದಿ…


ವೈ…ಓ…: ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಮುಗಿದಿದೆ. ಇಷ್ಟು ದಿನ ಬೇಸಿಗೆ ದಿನಗಳಲ್ಲಿ ಅಜ್ಜಿ-ಅಜ್ಜನ ಮನೆಯ ಮುದ್ದಾಟ, ಮಾವಿನ ಹಣ್ಣಿನ ಸಿಹಿ, ಗಾಳಿಪಟದ ಆಟಗಳಲ್ಲಿ ಮುಳುಗಿದ್ದ ಮಕ್ಕಳು, ಈಗ ಮತ್ತೆ ಪುಸ್ತಕಗಳ ಲೋಕಕ್ಕೆ ಕಾಲಿಟ್ಟರು. ಆಟ ಆಡಿದವನಿಗೆ ಓದಿನ ಬೆಲೆ ಗೊತ್ತು ಎನ್ನುವ ಗಾದೆಯಂತೆ, ರಜೆ ಸಂಭ್ರಮದ ಬಳಿಕ ಪಾಠದ ಪಯಣ ಆರಂಭವಾಯಿತು. ವಿಜಯಪುರ ನಗರದ ಪ್ರತಿಷ್ಠಿತ ರವೀಂದ್ರನಾಥ ಠಾಗೋರ್ ಸಿಬಿಎಸ್ಇ ಶಾಲೆ ಸೇರಿದಂತೆ ನಗರದ ಹಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಿದವು. ಶಾಲಾ ದ್ವಾರಗಳಲ್ಲಿ ಬಲೂನುಗಳ ತೋರಣ ಕಂಗೊಳಿಸಿದರೆ, ಹೂವಿನ ಸುರಿಮಳೆಯ ನಡುವೆ ಪುಟಾಣಿಗಳು ಶಾಲೆಗೆ ಕಾಲಿಟ್ಟ ದೃಶ್ಯ ಮನಸೆಳೆಯಿತು. ಇನ್ನೂ ಬಲೂನ್ ಹಾರಿಸಿ ಬಿಡಲಾಯಿತು.


ವೈ…ಓ…: ಇನ್ನೂ ವಿದ್ಯಾರ್ಥಿಗಳಿಗೆ ಖಾಸಗಿ ಶಾಲಾ ಮಂಡಳಿಗಳು ಆರತಿ ಬೆಳಗಿ ಸ್ವಾಗತಿಸಿದರು. ಈ ವೇಳೆ ಸಿಹಿ ವಿತರಣೆ, ಕರತಾಡನ ಹಾಗೂ ಸಂಗೀತದ ಸ್ವಾಗತ ಮಕ್ಕಳ ಮುಖದಲ್ಲಿ ನಗು ಮೂಡಿಸಿತು. ವಿದ್ಯಾದೇವತೆ ಸರಸ್ವತಿಯ ಪೂಜೆ ನೆರವೇರಿಸಿ, “ಜ್ಞಾನವೇ ಬೆಳಕು” ಎಂಬ ಸಂದೇಶ ಸಾರಲಾಯಿತು.
ಶಾಲಾ ಆವರಣಗಳು ಇಂದು ಹೂಬಿಟ್ಟ ತೋಟದಂತೆ ಅರಳಿದ್ದವು. ಹೊಸ ಯುನಿಫಾರ್ಮ್ ಧರಿಸಿದ ಮಕ್ಕಳು ಬಣ್ಣಬಣ್ಣದ ಚಿಟ್ಟೆಗಳಂತೆ ಕಂಡುಬಂದರು. ಕೆಲವರ ಹೆಗಲ ಮೇಲೆ ಹೊಸ ಬ್ಯಾಗ್ ಹೊಳೆಯುತ್ತಿದ್ದರೆ, ಮತ್ತಷ್ಟು ಮಕ್ಕಳು ಹೊಸ ಪುಸ್ತಕದ ಸುವಾಸನೆಗೆ ಮಾರುಹೋಗಿದ್ದರು.
ಇನ್ನೊಂದೆಡೆ, ಪಾಲಕರು ಕೂಡ ಮಕ್ಕಳ ಶಿಕ್ಷಣ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದರು. ಯುನಿಫಾರ್ಮ್, ಶೂ, ಪುಸ್ತಕ ಹಾಗೂ ಶಾಲಾ ಸಾಮಗ್ರಿ ಖರೀದಿಸಲು ಅಂಗಡಿಗಳ ಮುಂದೆ ಜನಸಂದಣಿ ಕಂಡುಬಂತು.”ಮಕ್ಕಳ ವಿದ್ಯೆ ಮನೆತನದ ಭವಿಷ್ಯ”ಎನ್ನುವ ನಂಬಿಕೆಯಿಂದ ಪಾಲಕರು ಖರೀದಿಯಲ್ಲಿ ತೊಡಗಿದ್ದರು.

ವೈ…ಓ…: ಒಟ್ಟಾರೆ, ವಿಜಯಪುರ ನಗರದಲ್ಲಿ ಶಾಲಾರಂಭದ ಮೊದಲ ದಿನವು ಮಕ್ಕಳ ನಗು, ಪೋಷಕರ ಸಂಭ್ರಮ ಮತ್ತು ಶಾಲೆಗಳ ಸಡಗರದಿಂದ ಹಬ್ಬದ ವಾತಾವರಣವನ್ನು ಮೂಡಿಸಿತು.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
