ವಿಶ್ವಪ್ರಸಿದ್ಧ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 215 ಕೋಟಿ ರೂಪಾಯಿ ಭಾರಿ ಅನುದಾನ ಮಂಜೂರು ಮಾಡಿದೆ. ಬೃಹತ್ ಕಾಮಗಾರಿಗಳ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಆಹ್ವಾನಿಸುವ ಕುರಿತು ಇಂದು ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಗಿದೆ.


ಬೆಳಗಾವಿಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮಾ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರವು 215 ಕೋಟಿ ರೂಪಾಯಿ ಮಂಜೂರು ಮಾಡಿದ್ದು, ಸಿಎಂ, ಡಿಸಿಎಂ ಮತ್ತು ಜಿಲ್ಲಾ ಉಸ್ತುವಾರಿಗಳನ್ನು ಆಹ್ವಾನಿಸಲು ಒಂದು ದಿನಾಂಕ ನಿಗದಿ ಪಡಿಸಿ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಲು ಇಂದು ಜಿಲ್ಲಾಧಿಕಾರಿಗಳೊಟ್ಟಿಗೆ ಸಭೆಯನ್ನು ನಡೆಸಲಾಗಿದೆ. ಸೋಮವಾರ ಅಥವಾ ಮಂಗಳವಾರ ಸಿಎಂ ಅವರಿಂದ ಡೇಟ್ ಪಡೆಯಲಾಗುವುದು. ಈಗಾಗಲೇ ತೆರವು ಕಾರ್ಯಾಚರಣೆಯ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಕ್ಯೂ ಕಾಂಪ್ಲೇಕ್ಸ್, ಅನ್ನ ದಾಸೋಹ ಭವನ, ಆಡಳಿತ ಕಚೇರಿ, ವಾಕರ್ಸ್ ಝೋನ್ ಇನ್ನುಳಿದ ಕಾಮಗಾರಿಗಳಿಗೆ 180 ಕೋಟಿಯ ಟೆಂಡರ್ ಆಗಿದ್ದು, ಇನ್ನು 30 ಕೋಟಿ ಕಾಮಗಾರಿ ಕುರಿತು ಕ್ರಿಯಾ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು.


ಇನ್ನು ಯಲ್ಲಮ್ಮನಗುಡ್ಡದಲ್ಲಿನ ಮಳಿಗೆಗಳನ್ನು ಈಗೀರುವ ಅಂಗಡಿಕಾರರಿಗೆ ಹರಾಜಿನ ಮೂಲಕ ಒದಗಿಸಲಾಗುತ್ತಿದೆ. ಮತ್ತೊಂದು ಹಳೆಯ ಕಾಂಪ್ಲೇಕ್ಸ್ ತೆರವುಗೊಳಿಸಬೇಕಾಗಿದ್ದು, ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು. ಮಳೆಗಾಲದಲ್ಲಿ ಗರ್ಭಗುಡಿಗೆ ನೀರು ನುಗ್ಗುವುದನ್ನು ತಪ್ಪಿಸಲು ಅತಿಕ್ರಮಣ ತೆರವುಗೊಳಿಸಲಾಗುತ್ತಿದೆ. ಮುಂದಿನ ಸಲದಿಂದ ಅದನ್ನು ನಿಯಂತ್ರಿಸಲು ಪ್ರಯತ್ನಿಸಲಾಗುವುದು ಎಂದರು.
