ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಮತ್ತು ಔತಣಕೂಟದ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರು ಬೆಳಗಾವಿಯಲ್ಲಿ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ತಮಗೆ ಮುಖ್ಯಮಂತ್ರಿಗಳ ಔತಣಕೂಟಕ್ಕೆ ಯಾವುದೇ ಅಧಿಕೃತ ಆಹ್ವಾನ ಬಂದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುವುದಾಗಿ ಹೇಳಿದ್ದಾರೆ.


ಇಂದು ಬೆಳಗಾವಿಯಲ್ಲಿ ಮಾಧ್ಯಮಗಾರರೊಂದಿಗೆ ಅವರು ಮಾತನಾಡಿದರು. ನಾಳೆ ಸಿಎಂ ಸಿದ್ಧರಾಮಯ್ಯ ಔತಣಕೂಟಕ್ಕೆ ಸಂಬಂಧಿಸಿದಂತೆ ಸವದತ್ತಿ ಯಲ್ಲಮ್ಮಾ ಶಾಸಕ ವಿಶ್ವಾಸವೈದ್ಯ ಅವರು ಪ್ರತಿಕ್ರಿಯಿಸಿದ್ದು, ತಮಗೆ ಈ ಕುರಿತು ಯಾವುದೇ ಆಹ್ವಾನ ಬಂದಿಲ್ಲ. ಕರೆದರೇ ಹೋಗುತ್ತೇವೆ. ಇಂದು ಸವದತ್ತಿ ಯಲ್ಲಮ್ಮಾ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ 215 ಕೋಟಿ ರೂಪಾಯಿಯನ್ನು ಸರ್ಕಾರ ಒದಗಿಸಿದ್ದು, ಕೆಲ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಮುಖ್ಯಮಂತ್ರಿಗಳನ್ನು ಭೇಟಿಯಾಗಲೂ ಸಮಯ ನಿಗದಿ ಪಡಿಸಲು ಇಂದು ಸಭೆಯನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆ ತಾವು ಬೆಂಗಳೂರಿಗೆ ತೆರಳಿಲ್ಲ ಎಂದರು.


ಇನ್ನು ಶುಕ್ರವಾರ ಸಂಜೆಯೊಳಗೆ ಸಿಎಂ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ನಮಗೆ ಈ ಕುರಿತು ಯಾವುದೇ ಮಾಹಿತಿಯಿಲ್ಲ. ಸಿ.ಎಲ್.ಪಿ ಸಭೆ ಕುರಿತು ಅಧಿಕೃತ ಸೂಚನೆ ಬಂದಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರಾದರೇ ಒಳ್ಳೆಯದು. ಮುಂದಿನ ಬಾರಿ ಮತ್ತೇ ಕಾಂಗ್ರೆಸ್ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಅವರು ಒಳ್ಳೆಯ ಸಂಘಟನೆಯನ್ನು ಮಾಡುತ್ತಾರೆ. ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡುವುದು ಬಿಡುವುದು ಹೈಕಮಾಂಡ್’ಗೆ ಬಿಟ್ಟಿದ್ದು, ನಾವು ಯಾವುದಕ್ಕೂ ಲಾಬಿ ಮಾಡಲ್ಲ ಎಂದರು.

ಸಿದ್ಧರಾಮಯ್ಯನವರು ಸಿಎಂ ಆಗಿ ಒಳ್ಳೆಯ ಕೆಲಸವನ್ನು ಮಾಡಿದ್ದು, ಎಲ್ಲರಿಗೂ ಅನುದಾನವನ್ನು ಮಾಡಿದ್ದಾರೆ. ಅಹಿಂದ್ ನಾಯಕರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೇ, ಕಾಂಗ್ರೆಸ್ಸಿನ ಮೇಲೆ ಪರಿಣಾಮವಾಗುತ್ತಾ ಎಂಬ ಪ್ರಶ್ನೆಗೆ ಇದು ಹೈಕಮಾಂಡ್’ಗೆ ಬಿಟ್ಟಿದ್ದು. ನಮಗೆ ಮೆಸೇಜ್ ಬಂದರೇ, ನಾಳೆ ಬೆಂಗಳೂರಿಗೆ ಹೋಗುತ್ತೇವೆ. ಮೊದಲ ಬಾರಿ ಶಾಸಕರಾದವರೂ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದು, ನಿಜ. ಕೇಳುವುದರಲ್ಲಿ ತಪ್ಪೇನಿದೆ ಎಂದರು.
