State

ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ: ಸಿಎಂ ಬದಲಾವಣೆ ಪ್ರಶ್ನೆಗೆ ಕೈಮುಗಿದ ಎಐಸಿಸಿ ಅಧ್ಯಕ್ಷ!

Share

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ, ನಿರುದ್ಯೋಗ ಮತ್ತು ಪೇಪರ್ ಲೀಕ್ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದೇ ವೇಳೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ನೇತೃತ್ವ ಬದಲಾವಣೆ ಕುರಿತ ಪ್ರಶ್ನೆಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ತಂತ್ರವು ಬಡವರನ್ನು ಕಂಗಾಲು ಮಾಡುತ್ತಿರುವ ಒಂದು ರೀತಿಯ ‘ಸ್ಲೋ ಪಾಯ್ಸನಿಂಗ್’ (ನಿಧಾನವಿಷ) ಇದ್ದಂತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿದಿನ ಅತ್ಯಲ್ಪ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡುತ್ತಾ ವಾರದಲ್ಲಿ 10-12 ರೂಪಾಯಿವರೆಗೆ ಹೊರೆ ಹೆಚ್ಚಿಸಲಾಗುತ್ತಿದೆ; ಇತ್ತ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿ, ಎಂಎಸ್ಎಂಇ ಹಾಗೂ ಫ್ಯಾಕ್ಟರಿಗಳು ಮುಚ್ಚುತ್ತಿದ್ದರೂ ಪ್ರಧಾನಿ ಮಾತ್ರ ವಿದೇಶಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಟೀಕಿಸಿದರು. ನೀಟ್ ಹಾಗೂ ಸಿಬಿಎಸ್ಇ ಪರೀಕ್ಷೆಗಳಲ್ಲಿ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿದ್ದರೂ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸರ್ಕಾರ ಗಂಭೀರತೆ ತೋರುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ, ಕರ್ನಾಟಕ ರಾಜಕೀಯದ ಅತ್ಯಂತ ಕುತೂಹಲಕಾರಿ ವಿದ್ಯಮಾನದ ಕುರಿತು ಖರ್ಗೆ ಅವರ ಪ್ರತಿಕ್ರಿಯೆ ಕಂಡುಬಂತು. ಇಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ದೆಹಲಿಯಲ್ಲಿ ಹೈಕಮಾಂಡ್ನ ಮಹತ್ವದ ಸಭೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ “ಮುಖ್ಯಮಂತ್ರಿಗಳ ನೇತೃತ್ವ ಬದಲಾವಣೆ ಆಗಲಿದೆಯೇ?” ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ನೇರ ಪ್ರಶ್ನೆಗೆ ಉತ್ತರಿಸದ ಮಲ್ಲಿಕಾರ್ಜುನ ಖರ್ಗೆ ಅವರು, ಸುಮ್ಮನೆ ಕೈಮುಗಿಯುತ್ತಾ ಮುಂದೆ ಸಾಗಿದ ಪ್ರಸಂಗ ನಡೆಯಿತು. ಎಐಸಿಸಿ ಅಧ್ಯಕ್ಷರ ಈ ಮೌನ ಮತ್ತು ನಡೆ ಈಗ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Tags:

error: Content is protected !!